ಬೆಂಗಳೂರು: ಕೊರೊನಾ ಚಿಕಿತ್ಸೆಗೆ ಸರ್ಕಾರದ ಸೂಚನೆಯಂತೆ ಬೆಡ್ಗಳನ್ನು ನೀಡದ ಬೆಂಗಳೂರು ದಕ್ಷಿಣ ವಲಯದ 8 ಆಸ್ಪತ್ರೆಗಳ ಪರವಾನಗಿ ರದ್ದುಮಾಡುವ ಕುರಿತು ನಾಳೆ ನೋಟಿಸ್ ನೀಡಲಿದ್ದೇವೆ. 3 ದಿನಗಳಲ್ಲಿ ಆಸ್ಪತ್ರೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
8 ಖಾಸಗಿ ಆಸ್ಪತ್ರೆ ಪರವಾನಗಿ ರದ್ದುಗೊಳಿಸಿ ನಾಳೆ ನೋಟಿಸ್: ಸಚಿವ ಅಶೋಕ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ವಲಯದ ಸಭೆ ನಡೆಸಲಾಗಿದೆ. ನಮ್ಮ ವಲಯದಲ್ಲಿ ಹೆಚ್ಚು ಸಾವು ಆಗಿದ್ದನ್ನು ಸಿಎಂ ಗಮನಕ್ಕೆ ತಂದಿದ್ದೇವೆ. ಕಲಾಸಿಪಾಳ್ಯ, ಕೆ.ಆರ್. ಮಾರುಕಟ್ಟೆಗಳನ್ನು ಓಪನ್ ಮಾಡಬಾರದು ಎಂದು ಮನವಿ ಮಾಡಿದ್ದೇವೆ. ದಕ್ಷಿಣ ವಲಯದಲ್ಲಿ 8 ಆಸ್ಪತ್ರೆಗಳು ಸರ್ಕಾರಕ್ಕೆ ಕೊರೊನಾ ಬೆಡ್ಗಳನ್ನು ನೀಡದ ಕಾರಣ ನಾಳೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪರವಾನಗಿ ರದ್ದುಪಡಿಸುವ ಕುರಿತು ನೋಟಿಸ್ ನೀಡುತ್ತೇವೆ ಎಂದರು.
ಪೂರ್ತಿ ಬೆಡ್ ನೀಡಿದರೆ ತೆರಿಗೆ ವಿನಾಯಿತಿ?
ದಕ್ಷಿಣ ವಲಯದಲ್ಲಿ ಕೆಲ ಆಸ್ಪತ್ರೆಗಳು ಪೂರ್ತಿ ಬೆಡ್ಗಳನ್ನು ಸರ್ಕಾರಕ್ಕೆ ನೀಡಿವೆ. ಈ ರೀತಿ ಎಲ್ಲಾ ಬೆಡ್ಗಳನ್ನು ಸರ್ಕಾರಕ್ಕೆ ನೀಡಿದಲ್ಲಿ ಅಂತಹ ಆಸ್ಪತ್ರೆಗಳಿಗೆ ಒಂದು ವರ್ಷದ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಇದು ಉತ್ತಮ ಸಲಹೆ ಎಂದು ಸಿಎಂ ಸಹ ಹೇಳಿದ್ದಾರೆ. ವಿನಾಯಿತಿ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಅಶೋಕ್ ತಿಳಿಸಿದರು.
ಕೊರೊನಾ ಸೋಂಕು ಪತ್ತೆಯಾಗಿರುವವರ ಮನೆಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಾಮೀಟರ್ ಸೇರಿದಂತೆ ಎಲ್ಲಾ ಅಗತ್ಯ ವೈದ್ಯಕೀಯ ಪರಿಕರ ಇರುವ ಮೆಡಿಕಲ್ ಕಿಟ್ ಕೊಡಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇವೆ ಎಂದರು.
ಶಾಂತಿನಗರದಲ್ಲಿ ಮನೆಗೆ ಶೀಟ್ ಬಳಸಿ ಸೀಲ್ ಮಾಡಿರುವುದು ಸರಿಯಲ್ಲ. ಅದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಈ ರೀತಿ ಕಠಿಣವಾಗಿ ವರ್ತಿಸದಂತೆ ಸೂಚಿಸಿರುವುದಾಗಿ ಸಚಿವರು ಹೇಳಿದರು.
ಸಿಎಂ ಯಡಿಯೂರಪ್ಪ ಅವರು ಹೆಚ್ಚು ಹೆಚ್ಚು ಕೊರೊನಾ ಪರೀಕ್ಷೆಗಳನ್ನು ಮಾಡಲು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಎನ್ಜಿಓ ಸಹಕಾರ ಪಡೆಯಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇರಿಸಲಾಗಿದೆ. ಎಷ್ಟು ಬೆಡ್ ಖಾಲಿ ಇವೆ, ಭರ್ತಿಯಾಗಿವೆ ಎನ್ನುವ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.