ಬೆಂಗಳೂರು:ರಾಜ್ಯ ಸರ್ಕಾರ ವಿಧಿಸಿರುವ ಲಾಕ್ಡೌನನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಲಾಕ್ಡೌನ್ ಅಂತೆ ಲಾಕ್ಡೌನ್. ಬದನೆಕಾಯಿ. ಸರ್ಕಾರ ಕಾಟಾಚಾರಕ್ಕೆ ಲಾಕ್ಡೌನ್ ಮಾಡ್ತಾ ಇದೆ. ಲಾಕ್ಡೌನ್ ವಿಚಾರದಲ್ಲಿ ಗಂಭೀರತೆ ಕಾಣಿಸ್ತಾ ಇಲ್ಲ. ಲಾಕ್ಡೌನ್ ಕಟ್ಟು ನಿಟ್ಟಾಗಿ ಜಾರಿ ಮಾಡಲು ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ." ಎಂದು ಆರೋಪಿಸಿದ್ದಾರೆ.
ಸರ್ಕಾರ ಕೊರೊನಾ ಸೋಂಕು ತಡೆಯಲು ಲಾಕ್ಡೌನ್ ವಿಧಿಸಿದೆಯೋ ಅಥವಾ ಸೋಂಕು ಹರಡಲು ವಿಧಿಸಿದೆಯೋ? ತನ್ನ ಜವಾಬ್ದಾರಿಯಿಂದ ನುಣಚಿಕೊಂಡು, ಜನರನ್ನು ಕೋವಿಡ್ ದವಡೆಗೆ ತಳ್ಳಿ, ಈಗ ಭಗವಂತನೇ ಕಾಪಾಡಬೇಕು ಅನ್ನೋ ಸರ್ಕಾರ ಅಧಿಕಾರದಲ್ಲಿರಲು ಲಾಯಕ್ ಇಲ್ಲ. ಸುಮ್ಮನೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ ಎಂದು ಆಗ್ರಹಿಸಿದ್ದಾರೆ.
ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ತಮ್ಮ ನಿವಾಸದ ಮುಂದೆ ಸುದ್ದಿಗಾರರ ಜೊತೆ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದ್ದು, ಉಸ್ತುವಾರಿ ಸಚಿವರು ಮಾತ್ರವಲ್ಲ ಇಡೀ ಸರ್ಕಾರವೇ ರಾಜೀನಾಮೆ ಕೊಟ್ಟು ತೆರಳಬೇಕು ಎಂದು ಆಗ್ರಹಿಸಿದ್ದರು.
ಇದೀಗ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಇದೇ ನಿಟ್ಟಿನಲ್ಲಿ ಮಾತನಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದರು.