ಬೆಂಗಳೂರು :ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಸೆಕ್ಷನ್ 94 (1-ಎ) (ಐ) ಅಡಿ ಶೈಕ್ಷಣಿಕ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿ ವಿನಾಯಿತಿಗಾಗಿ ಸರ್ಟಿಫಿಕೆಟ್ ಪಡೆಯಬೇಕಾಗಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ವಿಜಯಪುರ ನಗರಸಭೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ನಗರಸಭೆ ಸೆಕ್ಷನ್ 142 (1) (ವಿ) ಅನ್ವಯ ತೆರಿಗೆ ಬಾಕಿ ಹಣ ಪಾವತಿಸುವಂತೆ ಕೋರಿ ನೀಡಿದ್ದ ಡಿಮ್ಯಾಂಡ್ ನೋಟಿಸ್ ರದ್ದುಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಸೆಕ್ಷನ್ 94 (1-ಎ) (ಐ) ಅಡಿ ಶೈಕ್ಷಣಿಕ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿಗೆ ಬ್ಲಾಂಕೆಟ್ ವಿನಾಯಿತಿ ಇಲ್ಲ. ಅವು ಪ್ರತಿ ವರ್ಷ ವಿನಾಯಿತಿ ಕೋರಿ ಸಿಎಂಸಿಯಿಂದ ಸರ್ಟಿಫಿಕೆಟ್ಗೆ ಅರ್ಜಿ ಸಲ್ಲಿಸಬೇಕು. ಆ ಬಗ್ಗೆ ಪರಿಶೀಲಿಸುವ ಸಿಎಂಸಿ ತನಗೆ ಎಲ್ಲ ಮಾನದಂಡಗಳು ಸರಿಯಾಗಿವೆ ಎಂಬುದು ಮನವರಿಕೆಯಾದರೆ ಸರ್ಟಿಫಿಕೆಟ್ ವಿತರಿಸಲಿದೆ ಎಂದು ವಾದಿಸಿದ್ದರು. ಅಲ್ಲದೆ, ಸರ್ಟಿಫಿಕೇಟ್ ಇಲ್ಲದೆ, ತೆರಿಗೆ ಪಾವತಿದಾರರು ಯಾವುದೇ ರೀತಿಯಲ್ಲೂ ಸ್ವಯಂ ಪ್ರೇರಿತವಾಗಿ ತೆರಿಗೆ ಪಾವತಿಯಿಂದ ವಿನಾಯಿತಿ ಕೋರಲಾಗದು ಎಂದು ತಿಳಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಶಿಕ್ಷಣ ಸಂಸ್ಥೆಯ ಪರ ವಕೀಲರು, ಕೆಎಂಸಿ ಕಾಯಿದೆಯಡಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆ ವಿನಾಯಿತಿ ಪರಿಪೂರ್ಣವಾದುದು. ವಿನಾಯಿತಿ ಸರ್ಟಿಫಿಕೆಟ್ಗೆ ಅರ್ಜಿ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸೆಕ್ಷನ್ 94 (1-ಎ) (ಐ) ಅಡಿ ಸ್ವಯಂಪ್ರೇರಿತವಾಗಿ ವಿನಾಯಿತಿ ಸಿಗಲಿದೆ ಎಂದು ವಾದಿಸಿದ್ದರು.