ಬೆಂಗಳೂರು :ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಶಿಕ್ಷಕ ತರಬೇತಿ ಸಂಸ್ಥೆಗಳು ಬಲಿಷ್ಠಗೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಡಿಎಸ್ಇಆರ್‌ಟಿ ಸೇರಿದಂತೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.
ಸೋಮವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ಪ್ರಗತಿ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಎಸ್‌ಇಆರ್‌ಟಿ ಸಂಸ್ಥೆಯು ಶಿಕ್ಷಣ ಸಂಶೋಧನೆಯಲ್ಲಿ ಪ್ರಧಾನ ಜವಾಬ್ದಾರಿ ಹೊಂದಿದೆ. ಈ ಸ್ವಾಯತ್ತ ಸಂಸ್ಥೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಂಶೋಧನಾ ವಿದ್ವಾಂಸರ ಸೇವೆ ಪಡೆಯಲು ಆಲೋಚಿಸಲಾಗಿದೆ ಎಂದರು.
ಗುಣಾತ್ಮಕ ಶಿಕ್ಷಣದ ಪರಿಕಲ್ಪನೆ ಸಾಕಾರವಾಗಬೇಕಾದಲ್ಲಿ ತರಬೇತಿ ಪ್ರಕ್ರಿಯೆ ವಸ್ತುನಿಷ್ಠವಾಗಬೇಕಿದೆ. ತರಬೇತಿ ಮೌಲ್ಯಮಾಪನ ವ್ಯವಸ್ಥೆ ಬಲಗೊಳ್ಳಬೇಕಿದೆ. ಶಿಕ್ಷಣ ಗುಣಮಟ್ಟ ಸುಧಾರಣೆಯ ಹಿನ್ನೆಲೆ ಈ ತರಬೇತಿಯ ಫಲಿತಾಂಶ ಶಾಲಾ ತರಗತಿಯಲ್ಲಿ ಪ್ರತಿಫಲನಗೊಂಡು ನಮ್ಮ ಮಕ್ಕಳು ಅದರ ಪ್ರಯೋಜನ ಪಡೆಯುವಂತಾಗಬೇಕು. ಈ ತರಬೇತಿಯ ಅನುಪಾಲನಾ ವ್ಯವಸ್ಥೆ ಮೇಲಿಂದ ಮೇಲೆ ನಡೆಯುವಂತಹ ವ್ಯವಸ್ಥೆ ರೂಪುಗೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಪ್ರಸ್ತುತ ವ್ಯವಸ್ಥೆಯಲ್ಲಿ ತರಬೇತಿಗಳಷ್ಟೇ ನಡೆಯುತ್ತಿವೆ. ಸಂಶೋಧನೆಗಳು ಅಷ್ಟಾಗಿ ಕಂಡು ಬರುತ್ತಿಲ್ಲ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತರಬೇತಿಗಳಷ್ಟೇ ಸಾಕಾಗದು. ಬದಲಾದ ಕಾಲಮಾನಕ್ಕನುಗುಣವಾಗಿ ನಮ್ಮ ಸಂಶೋಧನಾ ಸಂಸ್ಥೆಗಳೂ ಬದಲಾಗಬೇಕಿದೆ. ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯನ್ನು ಪುನರ್ ರೂಪಿಸಬೇಕಾದ ಅಗತ್ಯವಿದೆ. ಈ ಕುರಿತು ಅಗತ್ಯ ಕ್ರಿಯಾ ಯೋಜನೆ ರೂಪಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜುಲೈ 1ರಿಂದ ಸಂವೇದಾ ದೂರದರ್ಶನ ಪಾಠ ಪ್ರಸಾರ :ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜುಲೈ1ರಿಂದ ದೂರದರ್ಶನದ ಚಂದನಾ ವಾಹಿನಿ ಮೂಲಕ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುವುದು. ಈ ಸಂದರ್ಭದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪಾಠಗಳು ಪ್ರಸಾರವಾಗಲಿವೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮರಾಠಿ ಮಾಧ್ಯಮದ ಪಾಠಗಳನ್ನು ಯೂ-ಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ತಿಳಿಸಿದರು.
2021-22ನೇ ಸಾಲಿನಲ್ಲಿ ಭೌತಿಕ ತರಬೇತಿಗಳು ಪ್ರಾರಂಭವಾದಲ್ಲಿ ಶಿಕ್ಷಕರು ನಿರ್ವಹಿಸಬೇಕಾದ ಬೋಧನೆ ಹಾಗೂ ಮೌಲ್ಯಮಾಪನ ಕ್ರಮದ ಖಚಿತವಾದ ರೂಪುರೇಷೆಗಳನ್ನು ನಾವು ಹೊಂದಿರಬೇಕೆಂದು ಸಲಹೆ ನೀಡಿದ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಡಯಟ್‍ಗಳು ಉತ್ತಮ ಉಪಕ್ರಮಗಳನ್ನು ಕ್ರೋಡಿಕರಿಸಿ ಅವುಗಳನ್ನು ಇತರರೂ ಅನುಸರಿಸುವ ನಿಟ್ಟಿನಲ್ಲಿ ಕೈಪಿಡಿಯೊಂದನ್ನು ಹೊರತರಬೇಕೆಂದು ಸೂಚಿಸಿದರು.
ಭಾಷಾ ಪ್ರಯೋಗಾಲಯಗಳು ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳಾಗಲಿ:
ಇಲಾಖೆ ಆಶ್ರಯದ ರಾಜ್ಯದ ನಾಲ್ಕು ವಿಭಾಗಗಳಲ್ಲಿರುವ ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರಗಳಲ್ಲಿ ತೆಲುಗು, ತಮಿಳು, ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೌಶಲ್ಯ ಸ್ಥಾಪನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ಕೇಂದ್ರದಲ್ಲಿ ಸುಸಜ್ಜಿತ ಗ್ರಂಥಾಲಯ ಸೌಲಭ್ಯಗಳು, ತಂತ್ರಜ್ಞಾನ ವ್ಯವಸ್ಥೆಗಳನ್ನು ನಿರ್ಮಿಸಿಕೊಡಲಾಗಿದೆ. ಸುಸಜ್ಜಿತ ಭಾಷಾ ಪ್ರಯೋಗಾಲಯಗಳ ಸ್ಥಾಪನೆ ಅಂತಿಮ ರೂಪವನ್ನು ಪಡೆದುಕೊಳ್ಳುತ್ತಿದೆ. ಈ ಪ್ರಯೋಗಾಲಯಗಳು ಭಾಷಾ ಸಾಹಿತ್ಯದಲ್ಲಿ ಚಟುವಟಿಕೆಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸಲಿವೆ. ಸುಸಜ್ಜಿತ ತಾಂತ್ರಿಕ ಸೌಲಭ್ಯಗಳನ್ನು ಒಳಗೊಳ್ಳಲಿದ್ದು, ಸದ್ಯದಲ್ಲೇ ಈ ನಾಲ್ಕು ಪ್ರಯೋಗಾಲಯಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.