ಕರ್ನಾಟಕ

karnataka

ETV Bharat / state

ಶಿಕ್ಷಣ ಸಚಿವರಾಗಿ ತಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಬಗ್ಗೆ ಬಹಿರಂಗಪಡಿಸಿದ್ರು ಸಚಿವ ಸುರೇಶ್ ಕುಮಾರ್ - Minister Suresh Kumar news

ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್​ಬುಕ್ ಖಾತೆಯಲ್ಲಿ 'ಶಿಕ್ಷಣ ಸಚಿವನಾಗಿ ನಾನು ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಒಂದು ದೊಡ್ಡ ಸಮಸ್ಯೆಯೆಂದರೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಶುಲ್ಕದ ವಿಚಾರ' ಎಂದು ಬರೆದುಕೊಂಡಿದ್ದಾರೆ.

banglore
ಸಚಿವ ಸುರೇಶ್ ಕುಮಾರ್

By

Published : Dec 21, 2020, 9:18 AM IST

ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಸುರೇಶ್ ​ಕುಮಾರ್ ತಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆವೊಂದರ ಬಗ್ಗೆ ಬಹಿರಂಗಪಡಿಸಿದ್ದಾರೆ.

ಹೌದು, ಈ ಕುರಿತಂತೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಸಚಿವರು 'ನಾನು ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಒಂದು ದೊಡ್ಡ ಸಮಸ್ಯೆಯೆಂದರೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಶುಲ್ಕದ ವಿಚಾರ' ಎಂಬುದನ್ನು ವಿವರಿಸಿದ್ದಾರೆ.

'ಕೊರೊನಾ ಸಮಾಜದ ಎಲ್ಲಾ ಕ್ಷೇತ್ರಗಳ ಮೇಲೂ ತನ್ನ ಕರಾಳ ಛಾಯೆಯನ್ನು ಚಾಚಿದೆ. ಎಲ್ಲಾ ಕ್ಷೇತ್ರಗಳು ಆರ್ಥಿಕವಾಗಿ ಜರ್ಜರಿತವಾಗಿವೆ. ಆರ್ಥಿಕವಾಗಿ ಸಾಕಷ್ಟು ಶಕ್ತಿವಂತರಾಗಿದ್ದ ಕಾಲದಲ್ಲಿ ಕೆಲವು ಪೋಷಕರು ದುಬಾರಿ ಎಂದು ಹೇಳಬಹುದಾದ ಶುಲ್ಕ ತೆಗೆದುಕೊಳ್ಳುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದರು.

ಅದೂ ಹೇಗೆ? ರಾತ್ರಿಯಿಡೀ ಶಾಲೆಯ ಮುಂದೆ ಸಾಲು ನಿಂತು ಶಾಲೆಯ ಅಡ್ಮಿಶನ್ ಅರ್ಜಿಯನ್ನು ಪಡೆದು ಕೆಲವು ಗಣ್ಯರಿಂದ ಶಿಫಾರಸು ಪತ್ರಗಳನ್ನು ಪಡೆದು ಕೊನೆಗೂ ತಮ್ಮ ಮಕ್ಕಳಿಗೆ ಆ ಶಾಲೆಯಲ್ಲಿ ಸೀಟು ದೊರಕಿದಾಗ ಪೋಷಕರಿಗೆ ಆಗಿರುವ ಆನಂದ ಊಹಾತೀತ. ಹೀಗೆ ಇದೇ ಶಾಲೆಯಲ್ಲಿ ನಮ್ಮ ಮಗು ಓದಬೇಕು ಎಂಬ ಹಂಬಲದಿಂದ ಕೆಲವು ಬಾರಿ ಹಠದಿಂದ ಮಕ್ಕಳನ್ನು ಸೇರಿಸಿರುವ ಪ್ರಕರಣಗಳು ಅನೇಕರಲ್ಲಿದೆ.

ಅದೇ ಶಾಲೆಯ ವಿರುದ್ಧ ಅದೇ ಪೋಷಕರು ಇಂದು ಘೋಷಣೆ ಹಾಕುವ ಸ್ಥಿತಿ ಬಂದಿದೆ. ಏಕೆಂದರೆ ಆ ಪೋಷಕರು ಇಂದು ಆರ್ಥಿಕವಾಗಿ ತುಸು ದುರ್ಬಲರಾಗಿದ್ದಾರೆ. ಆದರೆ ಶಾಲೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಈಗ ಪೋಷಕರು ಶುಲ್ಕ ಕಟ್ಟುತ್ತಿಲ್ಲ ಎಂದು ತಮ್ಮ ಕಷ್ಟವನ್ನು ಹೇಳುತ್ತಿದ್ದಾರೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಸಹ ಮಾಡುತ್ತಿದ್ದಾರೆ.

ಶಿಕ್ಷಣ ಸಚಿವ ಖಾಸಗಿ ಶಾಲೆಗಳಿಗೆ ಸಹಾಯ ಮಾಡುತ್ತಿಲ್ಲ ಎಂಬ ಕೂಗು ಕೇಳುತ್ತಿದೆ. ಇದರ ಜೊತೆಜೊತೆಗೆ ಶಿಕ್ಷಣ ಸಚಿವ ಖಾಸಗಿ ಶಾಲೆಗಳಿಗೆ ಅಂಕುಶ ಹಾಕುತ್ತಿಲ್ಲ ಎಂಬ ಕೂಗೂ ಸಹ ಕೇಳುತ್ತಿದೆ. ನನಗೆ ಪೋಷಕರ ಕಷ್ಟದ ಅರಿವು ಇದೆ. ಎಷ್ಟೋ ಜನ ಕಳೆದ ಎಂಟು ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅಥವಾ ಅವರ ಸಂಬಳದ ಶೇಕಡ 25ರಷ್ಟು ಇಂದು ಅವರಿಗೆ ಬರುತ್ತಿಲ್ಲ. ಅಂತಹವರಿಗೆ ತಾವು ಬಯಸಿ ತಮ್ಮ ಮಕ್ಕಳನ್ನು ಸೇರಿಸಿದ್ದ ಶಾಲೆಗಳ ದುಬಾರಿ ಶುಲ್ಕ ಕಟ್ಟಲು ಇಂದು ಅಸಾಧ್ಯವಾಗಿದೆ. ಅಂತವರಿಗೆಲ್ಲ ಸಹಜವಾಗಿ ಈ ವರ್ಷ ಶುಲ್ಕದಲ್ಲಿ ರಿಯಾಯಿತಿ ಬೇಕು ಎಂದು ಅನಿಸಿದರೆ ತಪ್ಪಲ್ಲ.

ಆದರೆ ಇದರ ಜೊತೆಜೊತೆಗೆ ಖಾಸಗಿ ಶಾಲೆಗಳ ಶಿಕ್ಷಕರು ಕಳೆದ ಎಂಟು ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿರುವ ಪರಿಸ್ಥಿತಿಯು ನಮ್ಮ ಮುಂದೆ ಇದೆ. ಅನೇಕ ಶಿಕ್ಷಕರು ಜೀವನ ನಿರ್ವಹಣೆಗಾಗಿ ತರಕಾರಿ ಮಾರುವುದು, ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವುದು. ಈ ಪ್ರಸಂಗಗಳು ಸಹ ವರದಿಯಾಗಿವೆ.

ಖಾಸಗಿ ಶಾಲೆಗಳ ವ್ಯವಸ್ಥಾಪಕರು ಹೇಳುವುದೇನೆಂದರೆ, ಪೋಷಕರು ಶುಲ್ಕ ಕಟ್ಟದಿದ್ದರೆ ನಾವು ಶಿಕ್ಷಕರಿಗೆ ಸಂಬಳ ಕೊಡುವುದು ಹೇಗೆ ಎಂದು. ಈ ಎಲ್ಲಾ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವುದಾದರೂ ಹಣಕಾಸಿನ ಸಹಾಯ ನೀಡಬೇಕೆಂಬುದು ಒಂದು ಆಗ್ರಹ. ಅದಕ್ಕಾಗಿ ನಾವು ಸರ್ಕಾರದಲ್ಲಿ ಬೇರೆಬೇರೆ ಕ್ರಮಗಳ ಬಗ್ಗೆ ಯೋಚಿಸಿದರೂ ಅದು ಕಾರ್ಯಗತವಾಗಲಿಲ್ಲ. ಏಕೆಂದರೆ ಸರ್ಕಾರದ ಹಣಕಾಸಿನ ಪರಿಸ್ಥಿತಿ ಬಹಳ ಆಶಾದಾಯಕವಾಗಿಲ್ಲ.

ಕಳೆದವಾರ ಖಾಸಗಿ ಶಾಲೆಗಳ ಮುಖ್ಯಸ್ಥರ ಸಂಘಟನೆಯ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿದ್ದರು. ತಮ್ಮ ಕಷ್ಟಗಳನ್ನೆಲ್ಲ ವಿವರಿಸಿದರು. ಆಗ ನಾನು ನಿಮ್ಮ ಶಾಲೆಯ ಪೋಷಕರು ಮತ್ತು ನಿಮ್ಮ ನಡುವೆ ಬಹಳ ಆರೋಗ್ಯಕರ ಸಂಬಂಧ ಇರಬೇಕು. ಏಕೆಂದರೆ ಆ ಪೋಷಕರು ನಿಮ್ಮ ಶಾಲೆಯನ್ನು ಪ್ರೀತಿಸಿ ಇದೇ ಶಾಲೆ ಬೇಕೆಂದು, ತಮ್ಮ ಮಕ್ಕಳನ್ನು ನಿಮ್ಮ ಶಾಲೆಗಳಿಗೆ ಸೇರಿಸಿದ್ದಾರೆ. ಹೀಗಿರುವಾಗ ನೀವು ಶಾಲಾ ವ್ಯವಸ್ಥಾಪಕ ಮಂಡಳಿ ರಚಿಸಿ ಆ ವೇದಿಕೆಯಡಿ ಪೋಷಕರ ಜೊತೆ ಏಕೆ ಮಾತನಾಡಬಾರದು? ಪೋಷಕರ ಸಮಸ್ಯೆಯನ್ನು ಏಕೆ ಆಲಿಸಬಾರದು? ನಂತರ ನಿಮ್ಮ ಪರಿಸ್ಥಿತಿಯನ್ನು ಪೋಷಕರಿಗೆ ಏಕೆ ವಿವರಿಸಬಾರದು? ಇಬ್ಬರ ನಡುವೆ ಸಂವಾದದ ನಂತರ ಇಬ್ಬರಿಗೂ ಹಿತಕರವೆನಿಸುವ ಸೂತ್ರ ಏಕೆ ತೀರ್ಮಾನಿಸಬಾರದು? ಎಂದು ಹೇಳಿದ್ದೆ' ಅಂತ ಬರೆದುಕೊಂಡಿದ್ದಾರೆ.

ಓದಿ:ಪ್ರತಿಭಟನಾ ನಿರತ ರೈತರನ್ನು ಕೃಷಿ ಸಚಿವ ತೋಮರ್​ ಭೇಟಿ ಮಾಡಲಿದ್ದಾರೆ : ಅಮಿತ್ ಶಾ ಮಾಹಿತಿ

ಅದಕ್ಕೆ ಆ ಮುಖ್ಯಸ್ಥರು ನಾವು ಚರ್ಚೆ ಮಾಡಿ ಬರುತ್ತೇವೆಂದು ಹೋಗಿದ್ದಾರೆ. ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ವರ್ಷ ನಮ್ಮ ಶಾಲೆಯಲ್ಲಿ ಆಡಳಿತಾತ್ಮಕ ವೆಚ್ಚಕ್ಕೆ ಮಾತ್ರ ಶುಲ್ಕ ತೆಗೆದುಕೊಂಡು ಪೋಷಕರ ಜೊತೆಗೆ ನಾವು ನಿಲ್ಲುತ್ತೇವೆ ಎಂಬ ಮಾತು ಶಾಲೆಗಳಿಂದ ಬಂದರೆ ಹಾಗೂ ನಮ್ಮ ಶಾಲೆಯ ಅಸ್ತಿತ್ವಕ್ಕಾಗಿ ನಾವು ಇಷ್ಟು ಶುಲ್ಕವನ್ನು ಕೊಡಲು ಸಿದ್ಧ ಎಂದು ಪೋಷಕರು ಘೋಷಿಸಿದರೆ ಆಗ ಸಮಸ್ಯೆಗೆ ಪರಿಹಾರ ಸರಳವಾಗುವುದು. ಅನೇಕ ಶಾಲೆಗಳಲ್ಲಿ ಪೋಷಕರಿಗೆ ಗೇಟಿನ ಒಳಗೆ ಪ್ರವೇಶ ಅವಕಾಶವಿಲ್ಲ ಎಂದು ಕೇಳಿ ಬಂದಿದೆ. ಆಗ ಸಹಜವಾಗಿ ಪೋಷಕರು ಗೇಟಿನ ಆಚೆ ನಿಂತು ಘೋಷಣೆ ಕೂಗುವ ಪರಿಸ್ಥಿತಿ ಬಂದೊದಗುತ್ತದೆ.

ಈ ವಾರ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಸಂಘಟನೆಗಳು ಪ್ರತಿಭಟನೆ ಮಾಡಿವೆ. ತಾವೂ ಒಂದು ಸಂಘಟನೆ ರಚಿಸಿಕೊಂಡು ಪೋಷಕರು ಸಹ ಪ್ರತಿಭಟನೆ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಬ್ಬರಿಗೂ ಹಿತಕರವಾದ ಪರಿಹಾರ ಹುಡುಕುವ ಜವಾಬ್ದಾರಿ ನನ್ನ ಪಾಲಿಗೆ ಬಂದಿದೆ. ಇದು ಬಹಳ ಕಷ್ಟ ಸಹ. ಪೋಷಕರು ಮತ್ತು ಖಾಸಗಿ ಶಾಲಾ ಶಿಕ್ಷಕರು ಇಬ್ಬರ ಪರಿಸ್ಥಿತಿಯು ನನಗೆ ಸಂಪೂರ್ಣ ಅರ್ಥವಾಗಿದೆ. ಇದರೊಂದಿಗೆ ಆರ್ಥಿಕವಾಗಿ ಶಕ್ತಿವಂತರಾಗಿ ರವರು ಸಹ ತಮ್ಮ ಮಕ್ಕಳ ಶುಲ್ಕವನ್ನು ಪಾವತಿ ಮಾಡಲು ಹಿಂದೇಟು ಹಾಕುತ್ತಿರುವುದು ಮತ್ತು ಕೋವಿಡ್-19 ರ ನೆಪ ಮುಂದಿಡುತ್ತಿರುವ ಪ್ರಸಂಗಗಳು ನಡೆದಿವೆ.

ಶ್ರೀಮಂತ ಶಾಲೆಗಳನ್ನು ಹೊರತು ಪಡಿಸಿ, ಬಜೆಟ್ ಶಾಲೆಗಳೆಂದು ಕರೆಯಲ್ಪಡುವ ಮಧ್ಯಮ ದರ್ಜೆ ಶಾಲೆಗಳು ಎದುರಿಸುತ್ತಿರುವ ಕಷ್ಟವೂ ಅಪಾರ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕೋವಿಡ್ ಮಹಾಮಾರಿಯ ಪರಿಣಾಮ ಪ್ರಾರಂಭವಾದಾಗಿನಿಂದ ನಾನು ಪೋಷಕರ ಪರವಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇನೆ.

ಪೋಷಕರ ಪರಿಸ್ಥಿತಿಯನ್ನು ಶಾಲೆಗಳು ಅರ್ಥಮಾಡಿಕೊಳ್ಳಬೇಕು. ಇದೇ ಸಮಯಕ್ಕೆ ತಮ್ಮ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆಯ ಕುರಿತು ಪೋಷಕರು ಯೋಚಿಸಬೇಕು. ಇಂದು ಈ ಮಹಾಮಾರಿಯ ಕಾರಣ ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಉಂಟಾಗಿರುವ ಅಪನಂಬಿಕೆಯನ್ನು ದೂರ ಮಾಡುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಲ್ಲಿ ನನಗೆ ಪೋಷಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿ ಇಬ್ಬರೂ ಸಹ ಆರೋಗ್ಯಕರ ಸಹಕಾರ ನೀಡಬೇಕೆಂದು ಸಚಿವ ಸುರೇಶ್​ ಕುಮಾರ್ ಮನವಿ ಮಾಡಿದ್ದಾರೆ.

ABOUT THE AUTHOR

...view details