ಬೆಂಗಳೂರು : ಆಗಸ್ಟ್ 30 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ ನಡೆಯಲಿದೆ. ಅಲ್ಲಿ 1 ರಿಂದ 8 ರವರೆಗೆ ಶಾಲಾ ತರಗತಿಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಜ್ಞರ ಸಮಿತಿ ಸಭೆ ಬಳಿಕ ಸಿಎಂ 1-8ನೇ ತರಗತಿ ಆರಂಭಿಸುವ ಬಗ್ಗೆ ನಿರ್ಧರಿಸುತ್ತಾರೆ. ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳಿವೆ. ಹಾಗಾಗಿ, ತಜ್ಞರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 23 ರಿಂದ 9- 12ರ ವರೆಗಿನ ತರಗತಿಗಳನ್ನು ಪ್ರಾರಂಭಿಸುತ್ತೇವೆ ಎಂದರು.
ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ :9 ರಿಂದ 12 ನೇ ತರಗತಿಪುನಾರಂಭ ಸಂಬಂಧ ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಶಾಲೆಗಳ ಪುನಾರಂಭಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಕಡೆ ಶಾಲೆಗಳು ಪುನಾರಂಭವಾಗಲಿದೆ. ಮಕ್ಕಳಿಗೆ ಪೂರಕವಾದ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ತಿಳಿಸಿದರು.
ಒಂದೇ ಒಂದು ಸೋಂಕು ಕಂಡು ಬಂದರೂ ಶಾಲೆ ಬಂದ್
ತರಗತಿಗಳು ಪುನಾರಂಭವಾದರೆ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮನೆಯಿಂದ ಬಂದು ಮತ್ತೆ ವಾಪಸಾಗುವವರೆಗೆ ಮಾಸ್ಕ್ ಧರಿಸಿರಬೇಕು. ಇದರ ಉಸ್ತುವಾರಿಯನ್ನು ಶಿಕ್ಷಕರು ನೋಡಿಕೊಳ್ಳುತ್ತಾರೆ. ಶಿಕ್ಷಕರಿಂದಲೂ ಶಾಲೆ ಪುನಾರಂಭಕ್ಕೆ ಬೆಂಬಲವಿದೆ. ಸೋಂಕು ಕಂಡು ಬಂದರೆ ಶಾಲೆ ನಿಲ್ಲಿಸುವ ಶಕ್ತಿ ಸರ್ಕಾರಕ್ಕಿದೆ. ಒಂದೇ ಒಂದು ಸೋಂಕು ಕಂಡು ಬಂದರೂ ತರಗತಿಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಸಚಿವರು ಹೇಳಿದರು.