ಬೆಂಗಳೂರು:ತಾಲೂಕು ಮಟ್ಟದ ಪರಿಶೀಲನಾ ಸಭೆ ವೇಳೆ ಬಹಳಷ್ಟು ತಾಲೂಕುಗಳಲ್ಲಿ ಪಾಸಿಟಿವಿಟಿ ದರವು ತುಂಬಾ ಕಡಿಮೆ ಇರುವುದು ತಿಳಿದು ಬಂದಿದೆ. 12 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಶೂನ್ಯವಿದೆ. ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡುವ ನಿರ್ಧಾರದ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವರು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರು ನಗರ, ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆಯಾ ಪ್ರದೇಶದ ವಾಸ್ತವಾಂಶ ತಿಳಿದುಕೊಂಡು ಶಾಲೆಗಳನ್ನು ನಡೆಸಲು ಸಾಧ್ಯವಿರುವಲ್ಲಿ ಎಂದಿನಂತೆ ತರಗತಿಗಳು ಮುಂದುವರೆಯಲಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕು ಏರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿಗಳು ಪ್ರಮುಖ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಸಿಟಿವಿಟಿ ದರ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.