ಬೆಂಗಳೂರು: ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿ ಕುರಿತಾದ ಪಾಠ ತೆಗೆಯಲು ತೀರ್ಮಾನಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್ ಮುಖಂಡ ಹೆಡ್ಗೇವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ ಸಾವರ್ಕರ್ ಹಾಗೂ ಚಿಂತಕ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಹಿಂದೆ ಇದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಸಾವಿತ್ರಿ ಪುಲೆ ಅವರ ವಿಷಯವನ್ನು ತೆಗೆದಿತ್ತು, ಅದನ್ನು ಮರಳಿ ಸೇರಿಸಲಾಗಿದೆ. ನೀ ಹೋದ ಮರುದಿನ ಅಂಬೇಡ್ಕರ್ ಅವರ ಬಗೆಗಿನ ಕವನ, ಮಗಳಿಗೆ ಬರೆದ ಪತ್ರ ಎಂಬ ನೆಹರೂ ಅವರದ್ದನ್ನೂ ಸಹ ಮರಳಿ ಸೇರಿಲಾಗುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ರಾಜಪ್ಪ ದಳವಾಯಿ, ರಮೇಶ್ ಕುಮಾರ್, ಪಿ.ಆರ್. ಚಂದ್ರಶೇಖರ್, ಅಶ್ವತ್ಥನಾರಾಯಣ ಹಾಗೂ ರಾಜೇಶ್ ಸೇರಿದಂತೆ ಐದು ಮಂದಿಯ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿ ಮುಂದಿನ ದಿನಗಳಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವರದಿ ನೀಡಲಿದೆ ಎಂದರು.
ಸಾಹಿತಿಗಳೆಲ್ಲ ಹೇಳಿದಾಗ ಈ ಹಿಂದಿನ ಪಠ್ಯದಲ್ಲಿದ್ದ ವಿಚಾರಗಳ ಕುರಿತಂತೆ 45 ಬದಲಾವಣೆಗಳನ್ನು ಮಾಡಲು ಯೋಚಿಸಲಾಗಿತ್ತು. ಪದಗಳು, ವಾಕ್ಯಗಳ ಬದಲಾವಣೆ ಹಾಗೂ ಚಾಪ್ಟರ್ ಬಗ್ಗೆ ಬದಲಾವಣೆ ಮಾಡುವ ಅಗತ್ಯವಿತ್ತು. ಆದರೆ ಪ್ರಿಂಟ್ ಆಗಿರುವ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲು ತಾಂತ್ರಿಕವಾಗಿ ಸಮಸ್ಯೆ ಇದೆ. ಹೀಗಾಗಿ ಈ ಬಾರಿ 6 ರಿಂದ 10 ನೇ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
6ರಿಂದ ರಿಂದ 10ನೇ ತರಗತಿ ವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಹಿಂದಿನ ಸರ್ಕಾರ ಮಾಡಿದ್ದ ಕೆಲವು ಬದಲಾವಣೆಗಳನ್ನು ಕೈಬಿಡಲಾಗುವುದು. ಪ್ರಸಕ್ತ ಸಾಲಿನ ಪಠ್ಯ ಪುಸ್ತಕ ಈಗಾಗಲೇ ಮುದ್ರಣವಾಗಿದ್ದು, ರಾಜ್ಯದ ಎಲ್ಲ ಶಾಲೆಗಳಿಗೆ ತಲುಪಿದೆ. ಹೀಗಾಗಿ ಆ ಪಠ್ಯಪುಸ್ತಕಗಳನ್ನು ವಾಪಸ್ ತರಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಲು ಹೋದರೆ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತದೆ. ಹೀಗಾಗಿ ಮುಂದಿನ ಎರಡು ವಾರಗಳಲ್ಲಿ ಸಪ್ಲಿಮೆಂಟರಿ ಹೊತ್ತಿಗೆಯೊಂದನ್ನು ಎಲ್ಲ ಶಾಲೆಗಳಿಗೆ ರವಾನಿಸಿ, ಮಕ್ಕಳ ಹಿತದೃಷ್ಟಿಯಿಂದ ಈಗಿರುವ ಪಠ್ಯದಲ್ಲಿ ಯಾವುದನ್ನು ಮಕ್ಕಳಿಗೆ ಭೋಧಿಸಬಾರದು ಮತ್ತು ಯಾವುದನ್ನು ಭೋಧಿಸಬೇಕು ಎಂಬುದರ ಬಗ್ಗೆ ಸೂಚಿಸುತ್ತೇವೆ. ಈಗ ಯಾವ್ಯಾವ ಪಠ್ಯವನ್ನು ತೆಗೆದುಹಾಕಬೇಕು, ಯಾವ್ಯಾವ ಪಠ್ಯವನ್ನು ಸೇರಿಸಬೇಕು ಎಂದು ತೀರ್ಮಾನಿಸಿದ್ಧೇವೋ? ಆ ಕುರಿತ ಮಾಹಿತಿ ಸಪ್ಲಿಮೆಂಟರಿ ಹೊತ್ತಿಗೆಯಲ್ಲಿ ಇರಲಿದೆ ಎಂದು ಸ್ಪಷ್ಟಪಡಿಸಿದರು.