ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ದಿಟ್ಟ ನಿರ್ಧಾರದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಬದಲಾವಣೆಗೆ ನಾಂದಿ ಹಾಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ.
ಗುರುವಾರ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಹೊರ ತಂದಿರುವ ನ್ಯಾಕ್ ಸುದ್ದಿಪತ್ರ ಬಿಡುಗಡೆ ಮಾಡಿ ವಿಶ್ವವಿದ್ಯಾಲಯಗಳು ಮತ್ತು ಪ್ರಮುಖ ಕಾಲೇಜುಗಳ ಪ್ರಾಂಶುಪಾಲರನ್ನು ಉದ್ದೇಶಿಸಿ ಬಿ ಸಿ ನಾಗೇಶ್ ಮಾತನಾಡಿದರು.
ಶಿಕ್ಷಣದಲ್ಲಿ ಬದಲಾವಣೆ ತರಬೇಕು. ಅದರ ಮೂಲಕ ವ್ಯಕ್ತಿತ್ವ ವಿಕಸನವಾಗಬೇಕು ಎಂದು ಕನಸು ಕಂಡಿರುವ ದೇಶದ ಅನೇಕ ಶ್ರೇಷ್ಠ ಮಹಾಪುರುಷರ ಎಲ್ಲ ಕನಸುಗಳನ್ನು ನನಸು ಮಾಡಲು ಸಾಧ್ಯವಾಗದೇ ಇರಬಹುದು. ಆದರೂ ನಾವು ಶಿಕ್ಷಣದಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನು ತಲುಪಿದ್ದೇವೆ.
ದೇಶದ ಎಲ್ಲ ಮೂಲೆಗಳಲ್ಲೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಬದಲಾವಣೆಗೆ ಮುನ್ನುಡಿ ಬರೆಯಿತು: ಉತ್ತಮ ವಾತಾವರಣದಲ್ಲಿ ವ್ಯಾಸಂಗ ಮಾಡಲು ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿರುವಂತಹ ಶಾಲೆಗಳನ್ನು ತೆರೆಯಲಾಗಿದೆ. 2000 ಇಸವಿಗೆ ಮೊದಲು ಚುನಾವಣೆ ಕರ್ತವ್ಯ ಎಂದರೆ ಶಿಕ್ಷಕರು ಬೇಡವೇ ಬೇಡ ಎನ್ನುತ್ತಿದ್ದರು. ಶೌಚಗೃಹ ಕೊರತೆ, ರಾತ್ರಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇರುತ್ತಿರಲಿಲ್ಲ. ಆದರೆ, ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಿಸಲು ಆರಂಭವಾದ ಸರ್ವ ಶಿಕ್ಷಣ ಅಭಿಯಾನ ಬದಲಾವಣೆಗೆ ಮುನ್ನುಡಿ ಬರೆಯಿತು ಎಂದರು.
ಈಗ ನಮ್ಮ ಇಲಾಖೆಯಲ್ಲೇ 48 ಸಾವಿರ ಶಾಲೆಗಳಿವೆ. ಶಾಲೆಗಳು ನಮ್ಮ ನಿರೀಕ್ಷೆಯಂತೆ ಇಲ್ಲದಿರಬಹುದು. ಆದರೆ, ಪಾಠದ ಗುಣಮಟ್ಟ ಚೆನ್ನಾಗಿದೆ. ಗುಣಮಟ್ಟ ಸುಧಾರಣೆಯಾಗದಿರಲು ಪ್ರೇರಣೆ, ಅಗತ್ಯ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇರಬಹುದು. ಬೋಧನೆ ಜೊತೆಗೆ ಬೇರೆ ಬೇರೆ ಕೆಲಸಗಳ ಜವಾಬ್ದಾರಿ, ಕೆಲಸದ ಒತ್ತಡ ಅದಕ್ಕೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ: ಮೆಕಾಲೆ ಶಿಕ್ಷಣದ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಆದರೆ, ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಆಗಿರಲಿಲ್ಲ. ಈಗ ಗಟ್ಟಿ ನಿರ್ಧಾರ ತೆಗೆದುಕೊಂಡು ಬದಲಾವಣೆ ತರಬಲ್ಲ ಸಮರ್ಥ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಈ ದೇಶ ಪಡೆದಿದೆ.