ಬೆಂಗಳೂರು : ಶಿಕ್ಷಣ ನಮ್ಮನ್ನು ಸ್ವಾಭಿಮಾನಿಯನ್ನಾಗಿಸಿ ಶೋಷಣೆಯಿಂದ ಮುಕ್ತಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿದ್ದ ಬಂಜಾರ ಭವನವನ್ನು ಇಂದು ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ನಾವೆಲ್ಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೆವು. ಬ್ರಿಟಿಷರು ಬಂದ ಮೇಲೆ ಶಿಕ್ಷಣದ ಅವಕಾಶಗಳು ತೆರೆದುಕೊಂಡವು. ಡಾ.ಬಿ.ಆರ್.ಅಂಬೇಡ್ಕರ್ ಕಾರಣದಿಂದ ವಂಚಿತರೆಲ್ಲರಿಗೂ ಶಿಕ್ಷಣ ಮೂಲಭೂತ ಹಕ್ಕಾಯಿತು. ಈ ಕಾರಣಕ್ಕೇ ನಾವೆಲ್ಲರೂ ಶಿಕ್ಷಿತರಾಗಬೇಕು. ಶಿಕ್ಷಣ ನಮ್ಮನ್ನು ಸ್ವಾಭಿಮಾನಿಯನ್ನಾಗಿಸುತ್ತದೆ. ಸ್ವಾಭಿಮಾನಿಯಾದರೆ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು ಎಂದರು.
ಬಂಜಾರ ಸಮುದಾಯದ ಏಳಿಗೆಗೆ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳ ಪಟ್ಟಿ ನೀಡಿದ ಸಿಎಂ, ಸೇವಾಲಾಲ್ ಮಠಕ್ಕೆ ನೆರವು ನೀಡಿದ್ದು ನಮ್ಮ ಸರ್ಕಾರ. ಸೇವಾಲಾಲ್ ಜಯಂತಿ ಆಚರಿಸಿದ್ದು ನಮ್ಮ ಸರ್ಕಾರ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರ. ಇನ್ನೂ 5 ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. ಜೊಗೆತೆ ಬಂಜಾರ ಸಮುದಾಯದ ಅಭಿವೃದ್ಧಿಗೆ ಬಜೆಟ್ನಲ್ಲಿ 275 ಕೋಟಿ ನೀಡಲಾಗಿತ್ತು. ಸೇವಲಾಲ್ ವಸತಿ ಶಾಲೆ ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು.