ಬೆಂಗಳೂರು :ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡುವ ಬಗೆಗೆ ರಾಜ್ಯ ಸರ್ಕಾರದಿಂದ ಆದೇಶ ಹೊರ ಬಿದ್ದಿದೆ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭವಿಷ್ಯದ ಕುರಿತಂತೆ ಆತಂಕ ಮನೆ ಮಾಡಿದೆ. ಈ ಬಗ್ಗೆ ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಶಿಕ್ಷಣ ತಜ್ಞ ಸುಪ್ರೀತ್ ಮಾತನಾಡಿದ್ದು, ಈ ಹಿಂದೆ ಪರೀಕ್ಷೆ ಇದೆಯೋ ಇಲ್ಲವೋ ಎಂದು ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಇತ್ತೀಚಿಗೆ ಪರೀಕ್ಷೆಗಳು ಬೇಡ ಎಂದು ಸ್ಪಷ್ಟ ನಿರ್ಧಾರ ಕೈಗೊಂಡು ಗೊಂದಲಕ್ಕೆ ತೆರೆ ಬಿದ್ದಿದೆ. ಒಂದು ನಿರ್ದಿಷ್ಟವಾದ ನಿಲುವಿಗೆ ಬರಲಾಗಿದೆ. ಗೊಂದಲವಂತು ನಿವಾರಣೆ ಆಗಿದೆ. ಆದರೆ, ಎಲ್ಲೋ ಒಂದು ಕಡೆ ಪೋಷಕರು ಮತ್ತು ಮಕ್ಕಳಲ್ಲಿ ಪರೀಕ್ಷೆ ಇಲ್ಲದಿರುವುದು ಮಾರಕವಾಗಬಹುದು ಎಂಬ ಆಂತಕ ಕೂಡ ಎದುರಾಗಿದೆ. ಮುಂದಿನ ಓದಿಗೆ ತಂದರೆಯಾಗಬಹುದು ಎಂದು ಕೂಡ ಯೋಚಿಸುತ್ತಿದ್ದಾರೆ ಎಂದರು.
ಮೇರಿಟ್ ಮೂಲಕ ಸೀಟು ಹಂಚಿಕೆ ಅನಿವಾರ್ಯ :ಪಿಯು ಪರೀಕ್ಷೆ ಬರೆಯುವರು ಕನಿಷ್ಠ ಆರು ಮುಕ್ಕಾಲು ಲಕ್ಷ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಏಳುವರೆ ಲಕ್ಷ ಮಕ್ಕಳು ಈ ಬಾರಿ ಹೊರ ಬರುತ್ತಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಸೀಟ್ ಭರ್ತಿಯಾಗಿ ಇನ್ನಷ್ಟು ಡಿಮ್ಯಾಂಡ್ ಏರ್ಪಾಡಾಗುವ ಸಾಧ್ಯತೆ ಇದೆ. ಪ್ರವೇಶ ಪರೀಕ್ಷೆ ಮಾಡುವುದರ ಮೂಲಕ ಮೆರಿಟ್ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಇಲಾಖೆ, ಅಧಿಕಾರಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಬಂಧ ಪಟ್ಟ ಸಚಿವರು ಗಮನ ಹರಿಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
2nd PUಗೆ ಆದ್ಯತೆ ನೀಡಿರುತ್ತಾರೆ ವಿದ್ಯಾರ್ಥಿಗಳು :ಎಸ್ಎಸ್ಎಲ್ಸಿ ಪರೀಕ್ಷೆಯಿಂದ ಶೇ.45, ಪ್ರಥಮ ಪಿಯು ಪರೀಕ್ಷೆಯಿಂದ ಶೇ. 45 ಮತ್ತು ಶೇ.10ರಷ್ಟು ಆಂತರಿಕ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಸಾರ್ವತ್ರಿಕವಾಗಿ ಒಪ್ಪುವಂತಿದ್ದರೂ, ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗುತ್ತಿದೆ. ದ್ವೀತಿಯ ಪಿಯು ವಿಷಯಕ್ಕೆ ಬರುವುದಾದರೆ ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ತಗೆದುಕೊಂಡ ಮಕ್ಕಳು ಹಿಂದಿನ ವರ್ಷಗಳಲ್ಲಿ ಪ್ರಥಮ ವರ್ಷಕ್ಕೆ ಅಷ್ಟು ಪ್ರಾಮುಖ್ಯತೆ ನೀಡಿರುವುದಿಲ್ಲ. ಮೊದಲ ಆದ್ಯತೆ ಅವರದು ಎರಡನೆ ವರ್ಷವೇ ಆಗಿರುತ್ತದೆ. ಶೇ. 45ರಷ್ಟು ಪ್ರಥಮ ಪಿಯು ಪರೀಕ್ಷೆಗೆ ಕೊಟ್ಟಿರುವುದು ಅಷ್ಟು ಸಮಂಜಸವಲ್ಲ ಎಂದು ನನಗನ್ನಿಸುತ್ತದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಮನೋಭಾವಬೆಳೆಸಬೇಕು :ಸರ್ಕಾರ ಒಂದು ನ್ಯಾಯಯುತ ತೀರ್ಮಾನಕ್ಕೆ ಬಂದಿದೆ. ಸಾರ್ವಜನಿಕರು,ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳನ್ನು ಪಾಸ್ ಮಾಡುವ ಈ ಸುಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮೌಲ್ಯಯುತ ಶಿಕ್ಷಣ, ತಜ್ಞರಿಗೆ ಒಂದು ಸವಾಲಿನ ಕೆಲಸವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ವಿಶ್ವವಿದ್ಯಾನಿಲಯಗಳು ಸಹ ರಾಷ್ಟ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿರುವುದರಿಂದ ಪಠ್ಯಕ್ರಮದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳಸುವ ಕೆಲಸವಾಗಬೇಕು ಎಂದು ತಿಳಿಸಿದರು.