ಬೆಂಗಳೂರು : ಪೋಷಕರು ಮತ್ತು ವಿದ್ಯಾರ್ಥಿ ಸಮುದಾಯದ ಒತ್ತಾಯದ ಹಿನ್ನೆಲೆ, ಶಾಲಾರಂಭ ಕುರಿತಂತೆ ಫೆ. 16ರಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಇಲಾಖೆಯ ಹಲವಾರು ವಿಷಯಗಳ ಮತ್ತು ಈಗಾಗಲೇ ಆರಂಭವಾಗಿರುವ ತರಗತಿಗಳ ಹಾಜರಾತಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಉಳಿದ ತರಗತಿಗಳ ಆರಂಭ ಕುರಿತು ವ್ಯಾಪಕವಾದ ಒತ್ತಾಯ ಕೇಳಿಬರುತ್ತಿದೆ ಎಂದರು.
ಇತ್ತೀಚೆಗೆ ಭೇಟಿ ನೀಡಿದ 15 ಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡುತ್ತಿರುವುದನ್ನು ನಾನು ಖುದ್ದಾಗಿ ಪರಿಶೀಲಿಸಿದ್ದು, ಶಾಲೆಗಳು ತಡವಾಗಿ ಆರಂಭವಾಗಿರುವುದರಿಂದ ಬಹು ಆಸ್ಥೆಯಿಂದ ಬರುತ್ತಿದ್ದಾರೆ. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಪಾಠ ಪ್ರವಚನ ಆಲಿಸುತ್ತಿರುವುದು ಕಂಡು ಬಂದಿದೆ ಎಂದರು.
ಶಾಲಾ ಸುರಕ್ಷತಾ ನಿಯಮಗಳ ಕುರಿತ ಸಭೆ:ಕಳೆದ ವಿಧಾನಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪವಾದ ಖಾಸಗಿ ಶಾಲೆಗಳ ಸುರಕ್ಷತಾ ನಿಯಮಗಳ ಸರಳೀಕರಿಸಬೇಕೆಂಬ ಪ್ರಸ್ತಾವನೆಗಳ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪಿನ ವ್ಯಾಪ್ತಿಯಲ್ಲಿಯೇ ಮರು ಪರಿಶೀಲಿಸುವ ಕುರಿತು ಫೆ. 16ರಂದು ಅಗ್ನಿಶಾಮಕ ದಳ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಕಡತ ವಿಲೇವಾರಿ ಯಜ್ಞ:ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಕಚೇರಿಗಳಲ್ಲಿ ಕೆಲಸಗಳು ಸರಿಯಾಗಿ ಹಾಗೂ ಸಕಾಲದಲ್ಲಿ ಆಗುತ್ತಿಲ್ಲವೆಂದು ಪದೇ ಪದೆ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆ, ಕಡತ ವಿಲೇವಾರಿ ಯಜ್ಞಕ್ಕೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸುರೇಶ್ ಕುಮಾರ್, ತಂತ್ರಜ್ಞಾನಾಧಾರಿತವಾದ ಆಡಳಿತಕ್ಕೆ ಪ್ರಾಶಸ್ತ್ಯ ನೀಡಬೇಕೆಂದು ಹೇಳಿದರು. ಮಾರ್ಚ್ ಒಂದರಂದು ಧಾರವಾಡ ಅಪರ ಆಯುಕ್ತಾಲಯ ವಿಭಾಗ ವ್ಯಾಪ್ತಿಯಲ್ಲಿ ಕಡತ ವಿಲೇವಾರಿ ಆದಾಲತ್‍ನ್ನು ನನ್ನ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಅದೇ ಮಾದರಿಯಲ್ಲಿ ಉಳಿದ ಆಯುಕ್ತಾಲಯಗಳೂ ಕ್ರಮ ವಹಿಸಲು ಮುಂದಾಗಬೇಕೆಂದೂ ಸಚಿವರು ಸೂಚಿಸಿದರು.