ಬೆಂಗಳೂರು:ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ರಾಕೆಟ್ ಉಡಾವಣೆಗೂ ಮುನ್ನ ರಾಕೆಟ್ ಮಾದರಿಯನ್ನು ತಿರುಮಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ನಡೆಯನ್ನು ಟೀಕಿಸಿದ್ದ ಸರ್ಕಾರಿ ಕಾಲೇಜು ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಎಂಬವರಿಗೆ ಸ್ಪಷ್ಟೀಕರಣ ನೀಡುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
'ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನ್ಸುತ್ತೆ' ಎಂದು ಉಪನ್ಯಾಸಕ ಹುಲಿಕುಂಟೆ ಮೂರ್ತಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಸೇರಿದಂತೆ ಕೆಲವರು ಅಸಮಾಧಾನ ಹೊರಹಾಕಿ, ಕ್ರಮಕ್ಕೆ ಒತ್ತಾಯಿಸಿದ್ದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸುರೇಶ್ ಕುಮಾರ್ ಈ ಬಗ್ಗೆ ಪತ್ರ ಬರೆದಿದ್ದರು.
ಎಸ್.ಸುರೇಶ್ ಕುಮಾರ್ ಪತ್ರ : 'ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಈಗ ಬೆಂಗಳೂರು ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ) ಕನ್ನಡ ಉಪನ್ಯಾಸಕರಾಗಿರುವ ಹುಲಿಕುಂಟೆ ಮೂರ್ತಿ ಅವರ ಅನಾರೋಗ್ಯಕರ ನಡವಳಿಕೆ ಕುರಿತು ಈ ಪತ್ರ ಬರೆಯುತ್ತಿದ್ದೇನೆ. ಕಳೆದ ಶುಕ್ರವಾರ 14/07/2023 ರಂದು ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಲೆಂದು ಇಡೀ ದೇಶ ಹಾರೈಸಿತ್ತು ಮತ್ತು ಅನೇಕ ಕಡೆ ಪ್ರಾರ್ಥನೆಗಳನ್ನು ಸಲ್ಲಿಸಲಾಗಿತ್ತು. ಅಂದು ಮಧ್ಯಾಹ್ನ ಉಡಾವಣೆ ಯಶಸ್ವಿಯಾದಾಗ ಇಡೀ ದೇಶ ಸಂಭ್ರಮಿಸಿತ್ತು. ಆದರೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಹುಲಿಕುಂಟೆ ಮೂರ್ತಿರವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮ್ಮ ಸ್ವೇಚ್ಛಾಚಾರವನ್ನಾಗಿ ತೋರಿದ್ದಾರೆ. ಆ ದಿನವೇ ಈ ಮಹನೀಯ ಉಪನ್ಯಾಸಕ ತನ್ನ ಟ್ವಿಟರ್ ಅಕೌಂಟ್ ಮೂಲಕ “ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನ್ಸುತ್ತೆ” ಎಂದು ಪೋಸ್ಟ್ ಮಾಡಿದ್ದಾರೆ. ಇಂತಹ ವ್ಯಕ್ತಿ ನಮ್ಮ ವಿದ್ಯಾರ್ಥಿಗಳಿಗೆ ಯಾವ ರೀತಿ ಪ್ರೇರಣೆ ನೀಡಲು ಸಾಧ್ಯ? ಹುಲಿಕುಂಟೆ ಮೂರ್ತಿಯವರಿಂದ ಈ ಕುರಿತು ಸ್ಪಷ್ಟೀಕರಣ ಕೇಳುವುದು ಹಾಗೂ ಮತ್ತೊಮ್ಮೆ ಈ ರೀತಿಯ ಬೇಜವಾಬ್ದಾರಿ ನಡವಳಿಕೆ ಜರುಗದಂತೆ ಎಚ್ಚರ ವಹಿಸಲು ಎಚ್ಚರಿಕೆ ನೀಡಬೇಕೆಂದು ಕೇಳುತ್ತೇನೆ' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದರು.
ಉಪನ್ಯಾಸಕ ಹುಲಿಕುಂಟೆ ಮೂರ್ತಿ ಅವರ ಟ್ವೀಟ್ ಮತ್ತು ಶಿಕ್ಷಣ ಸಚಿವರಿಗೆ ಬರೆದ ಪತ್ರವನ್ನು ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಉಪನ್ಯಾಸಕನ ಟ್ವೀಟ್ಗೆ ಸಾಕಷ್ಟು ಜನ ಆಕ್ಷೇಪ ವ್ಯಕ್ತಪಡಿಸಿ ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಟ್ವೀಟ್ ಕುರಿತು ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ನೋಟಿಸ್ಗೆ ನೀಡುವ ಉತ್ತರದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಗಳನ್ನೂ ಓದಿ: Chandrayana 3: ಚಂದ್ರಯಾನ 3 ಯಶಸ್ವಿ ಉಡಾವಣೆ: ಇಸ್ರೋದಲ್ಲಿ ಸಂಭ್ರಮದ ಹೊನಲು... ವಿಡಿಯೋ ನೋಡಿ