ಕರ್ನಾಟಕ

karnataka

ETV Bharat / state

ಅನಧಿಕೃತ ಶಾಲೆ, ತರಗತಿ, ಪಠ್ಯಕ್ರಮಕ್ಕೆ ಆ. 14ರೊಳಗೆ ಬ್ರೇಕ್ ಹಾಕಿ.. ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆ ಸೂಚನೆ - School education department

School education department: ರಾಜ್ಯದಲ್ಲಿ ನೋಂದಣಿ ಮಾಡದೇ ಅನಧಿಕೃತವಾಗಿ ನಡೆಸುತ್ತಿರುವ ಶಾಲೆ, ತರಗತಿ, ಪಠ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಆಗಸ್ಟ್​ 14ರ ಒಳಗೆ ಕ್ರಮಕೈಗೊಂಡು, ಆಗಸ್ಟ್​ 16ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

education-department-instructs-ddpis-to-submit-reports-on-non-registered-schools
ಅಕ್ರಮ ಶಾಲೆ, ತರಗತಿ, ಪಠ್ಯಕ್ರಮ ನಡೆಸುತ್ತಿರುವುದಕ್ಕೆ ಆಗಸ್ಟ್ 14ರೊಳಗೆ ಬ್ರೇಕ್ ಹಾಕಿ : ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆ ಸೂಚನೆ

By

Published : Aug 10, 2023, 6:48 PM IST

ಬೆಂಗಳೂರು :ರಾಜ್ಯದಲ್ಲಿ ನೋಂದಣಿ ಮಾಡದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, ತರಗತಿಗಳನ್ನು ನಡೆಸುತ್ತಿರುವುದು, ಅನಧಿಕೃತ ಪಠ್ಯಕ್ರಮ ಬೋಧನೆ, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿರುವುದನ್ನು ನಿಯಂತ್ರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಆಗಸ್ಟ್ 14ರ ವರೆಗೆ ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದು, ಆಗಸ್ಟ್​​ 16ರೊಳಗೆ ವರದಿಯನ್ನು ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ವರದಿ ಸಲ್ಲಿಕೆ ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 30, 31ರ ಪ್ರಕಾರ ಇಲಾಖಾ ವತಿಯಿಂದ ಯಾವುದೇ ನೋಂದಣಿಯನ್ನು ಪಡೆಯದೆ ಕಾರ್ಯ ನಿರ್ವಹಿಸುತ್ತಿವೆ. ಆಯಾ ಜಿಲ್ಲೆಗಳಲ್ಲಿ ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿರುವುದು ನಿಯಮಬಾಹಿರವಾಗಿದೆ.

ಈ ಸಂಬಂಧ ಶಾಲಾ ಆಡಳಿತ ಮಂಡಳಿಗಳಿಗೆ 45 ದಿನಗಳ ಸಮಯಾವಕಾಶ ನೀಡಿ 2023-24ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭವಾಗುವ ಮುನ್ನವೇ ತಕ್ಷಣ ನಿಯಮಾನುಸಾರ ಕ್ರಮ ವಹಿಸುವಂತೆ ಮತ್ತು ನಂತರದಲ್ಲಿ ಹಳೆಯ ಪದ್ಧತಿಯಲ್ಲೇ ಶಿಕ್ಷಣ ಮುಂದುವರೆಸಿದ್ದಲ್ಲಿ ಅಂತಹ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿತ್ತು. ಆದರೂ ರಾಜ್ಯದಲ್ಲಿ ಅನಧಿಕೃತ ಶಾಲೆಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ 1300 ಅನಧಿಕೃತ ಶಾಲೆಗಳಿದ್ದರೂ ಇಲಾಖೆ ಕ್ರಮ ವಹಿಸಿಲ್ಲ ಎನ್ನುವ ವರದಿ ಬಂದಿದೆ. ಹಾಗಾಗಿ ಕೂಡಲೇ ಆಯಾ ಜಿಲ್ಲೆಗಳಲ್ಲಿ ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಾಲಾ ನೋಂದಣಿ, ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚಬೇಕು. ಆಗಸ್ಟ್ 14ರ ಒಳಗೆ ನಿಯಮಾನುಸಾರ ಮುಚ್ಚಿಸಿ ಕ್ರಮ ಕೈಗೊಂಡ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಬೇಕು. ನಿಮ್ಮ ಜಿಲ್ಲೆಯಲ್ಲಿ ಯಾವುದೇ ನೋಂದಣಿ ಪಡೆಯದ ಶಾಲೆ ನಡೆಯುತ್ತಿಲ್ಲ ಎಂದು ದೃಢೀಕರಣ ನೀಡಬೇಕು. ನಂತರದಲ್ಲಿ ಅನಧಿಕೃತ ಶಾಲೆಗಳು ನಡೆಯುತ್ತಿರುವ ದೂರು ಬಂದಲ್ಲಿ ಆಯಾ ಉಪನಿರ್ದೇಶಕರನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂದು ಖಡಕ್​ ಸೂಚನೆ ನೀಡಲಾಗಿದೆ.

ಅದೇ ರೀತಿ ನೋಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತೀಕರಿಸಿ ತರಗತಿಗಳನ್ನು ನಡೆಸುತ್ತಿದ್ದಲ್ಲಿ ಅವುಗಳನ್ನೂ ನಿಯಮಾನುಸಾರ ಮುಚ್ಚಿಸಿ ಆಗಸ್ಟ್ 14ರ ಒಳಗೆ ಪತ್ರಿಕಾ ಪ್ರಕಟಣೆ ನೀಡಬೇಕು. ಯಾವುದೇ ಶಾಲೆಗಳಲ್ಲಿ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿ ನಡೆಯುತ್ತಿಲ್ಲ ಎಂದು ದೃಢೀಕರಣ ನೀಡಬೇಕು.

ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ ಮತ್ತು ಅಪೀಲಿಯೇಷನ್ ಪಡೆಯದೆ ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳು ನಿಯಮಾನುಸಾರ ಸಂಯೋಜನೆ ಪಡೆಯುವವರೆಗೂ ರಾಜ್ಯ ಪಠ್ಯಕ್ರಮವನ್ನೇ ಬೋಧಿಸುವಂತೆ ನೋಟಿಸ್ ನೀಡಬೇಕು. ರಾಜ್ಯ ಪಠ್ಯಕ್ರಮವನ್ನೇ ಬೋಧಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಆಗಸ್ಟ್ 14 ರ ಒಳಗೆ ವರದಿ ಪ್ರಕಟಿಸಬೇಕು. ರಾಜ್ಯ ಪಠ್ಯಕ್ರಮಕ್ಕೆ ನೋಂದಣಿ ಅನುಮತಿ ಪಡೆಯುವಂತಹ ಸಂದರ್ಭದಲ್ಲಿ ಅನುಮತಿ ಪಡೆದಿರುವಂತಹ ಮಾಧ್ಯಮವನ್ನು ಹೊರತುಪಡಿಸಿ ಬೇರೆ ಬೇರೆ ಮಾಧ್ಯಮದಲ್ಲಿ ನಡೆಸುತ್ತಿರುವ ಶಾಲೆಗಳಿಗೆ ನಿಯಮಾನುಸಾರ ನೋಟಿಸ್ ನೀಡಬೇಕು. ಅನುಮತಿ ಪಡೆದಿರುವ ಮಾಧ್ಯಮದಲ್ಲಿಯೇ ಬೋಧನೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆಗಸ್ಟ್ 14ರ ಒಳಗೆ ವರದಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೋಂದಣಿ ಅನುಮತಿ ಪಡೆಯುವಂತಹ ಸಂದರ್ಭದಲ್ಲಿ ಅನುಮತಿ ಪಡೆದು ನಡೆಸುತ್ತಿರುವ ವಿಭಾಗವನ್ನು ಹೊರತುಪಡಿಸಿ, ವಿಭಾಗಗಳನ್ನು ಹೆಚ್ಚಿಸಿಕೊಂಡಿರುವ ಶಾಲೆಗಳ ಮಾಹಿತಿಯನ್ನು ಕ್ರೋಢೀಕರಿಸಿ ತೆಗೆದುಕೊಳ್ಳಬಹುದಾದ ಕ್ರಮದ ಕುರಿತು ಪ್ರತ್ಯೇಕವಾಗಿ ಸುತ್ತೋಲೆ ಹೊರಡಿಸಬೇಕು. ಶಾಲೆಗಳ ಪ್ರಾರಂಭಿಸಲು ನೋಂದಣಿ ಅನುಮತಿ ಪಡೆದ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇಲಾಖಾ ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಮಾಡಿದ್ದಲ್ಲಿ ಅಥವಾ ಒಂದು ಆಡಳಿತ ಮಂಡಳಿಯಿಂದ ಮತ್ತೊಂದು ಆಡಳಿತ ಮಂಡಳಿಗೆ ಹಸ್ತಾತರಿಸಿದ್ದಲ್ಲಿ ಅಂತಹ ಶಾಲೆಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಬೇಕು.

ರಾಜ್ಯ ಪಠ್ಯಕ್ರಮಕ್ಕೆ ನೋಂದಣಿ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಸಂಯೋಜನೆಗೆ ಅಫಿಲಿಯೇಷನ್ ಪಡೆದ ನಂತರ ರಾಜ್ಯ ಪಠ್ಯಕ್ರಮವನ್ನೇ ಬೋಧಿಸುತ್ತಿದ್ದರೆ ಅಂತಹ ಶಾಲೆಗಳಿಗೆ ನೋಟಿಸ್ ನೀಡಬೇಕು. ಅನಧಿಕೃತವಾಗಿ ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ತರಗತಿಗಳನ್ನು ಆಗಸ್ಟ್ 14 ರ ಒಳಗೆ ಮುಚ್ಚಿಸಿ ಕ್ರಮ ಕೈಗೊಳ್ಳಬೇಕು. ಖಾಸಗಿ ಶಾಲೆಗಳ ಪ್ರಾರಂಭಕ್ಕೆ ನೋಂದಣಿ ಅನುಮತಿ ಪಡೆಯುವ ವೇಳೆ ನಿಗದಿಪಡಿಸಿದ್ದ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳದೆ ಬೇರೆ ಪಠ್ಯಪುಸ್ತಕ ಬೋಧಿಸುತ್ತಿರುವ ಶಾಲೆಗಳಿಗೆ ಕಡ್ಡಾಯವಾಗಿ ರಾಜ್ಯ ಪಠ್ಯಪುಸ್ತಕಗಳನ್ನೇ ಬಳಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡಬೇಕು ಎಂದು ಆದೇಶಿಸಿದೆ.

ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಇರುವ ಅನಧಿಕೃತ ಶಾಲೆಗಳನ್ನು ಗುರುತಿಸಿ ನಿಯಮಾನುಸಾರ ಕ್ರಮವಹಿಸಬೇಕು. ಇದರಲ್ಲಿ ಉದಾಸೀನತೆ ಹಾಗು ನಿರ್ಲಕ್ಷ್ಯತೆ ವಹಿಸದೆ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಎಷ್ಟು ಅನಧಿಕೃತ ಶಾಲೆಗಳ ಬಗ್ಗೆ ಕ್ರಮ ವಹಿಸಿದ್ದೀರಿ ಹಾಗು ನಂತರ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಶಾಲೆ ಇಲ್ಲವೆನ್ನುವ ಬಗ್ಗೆ ರಾಜ್ಯ ಹಾಗು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿಬೇಕು. ನಂತರ ಆ ಪತ್ರಿಕಾ ಪ್ರಕಟಣೆ ಮತ್ತು ಅನುಪಾಲನಾ ವರದಿಯನ್ನು ದೃಢೀಕರಿಸಿ ಆಗಸ್ಟ್ 16ರ ಒಳಗೆ ಸಲ್ಲಿಸಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ನೀವು ಯಾವುದೇ ಮಾಹಿತಿ ಸಲ್ಲಿಸದೇ ಇದ್ದಲ್ಲಿ ನಿಮ್ಮ ಕರ್ತವ್ಯ ಲೋಪವೆಂದು ಭಾವಿಸಿ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಗೌತಮ್ ಗುತ್ತಿಗೆದಾರನಲ್ಲ, ಆತ್ಮಹತ್ಯೆಗೂ ಕಾಮಗಾರಿಗಳ ಬಿಲ್ ಬಾಕಿಗೂ ಸಂಬಂಧವಿಲ್ಲ: ಕೆಟಿ ಮಂಜುನಾಥ್

ABOUT THE AUTHOR

...view details