ಕರ್ನಾಟಕ

karnataka

ETV Bharat / state

ವಿದ್ಯಾವಂತ ಪತ್ನಿಗೂ ಜೀವನಾಂಶ ನೀಡಬೇಕು : ಹೈಕೋರ್ಟ್ ಮಹತ್ವದ ತೀರ್ಪು - divorces news

ಪತ್ನಿಗೆ ಮಾಸಿಕ 3 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ಹೈಕೋರ್ಟ್​ ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಅರ್ಹಳು ಎಂದು ತೀರ್ಪು ನೀಡಿದೆ.

ವಿದ್ಯಾವಂತ ಪತ್ನಿಗೂ ಜೀವನಾಂಶ ನೀಡಬೇಕು
ವಿದ್ಯಾವಂತ ಪತ್ನಿಗೂ ಜೀವನಾಂಶ

By

Published : Feb 7, 2021, 12:13 AM IST

ಬೆಂಗಳೂರು: ಪತ್ನಿ ವಿದ್ಯಾವಂತೆ ಎಂಬ ಕಾರಣಕ್ಕೆ ಆಕೆಗೆ ಜೀವನಾಂಶ ನೀಡಲು ಪತಿ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ಪ್ರಕರಣವೊಂದರಲ್ಲಿ ದಂಪತಿ ನಡುವಿನ ವಿವಾಹವನ್ನು ಅನೂರ್ಜಿತಗೊಳಿಸಿ, ಪತ್ನಿಗೆ ಮಾಸಿಕ 3 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ ಶಾಸ್ತಿ ಅವರ‌ ಏಕಸದಸ್ಯ ಪೀಠ, ಪತ್ನಿ ವಿದ್ಯಾವಂತಳೆಂಬ ಕಾರಣಕ್ಕೆ ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಹೇಳಲು ಬರುವುದಿಲ್ಲ. ವಿದ್ಯಾರ್ಹತೆ ಇದ್ದ ಮಾತ್ರಕ್ಕೆ ಉದ್ಯೋಗ ಪಡೆದು, ತನ್ನ ಜೀವನವನ್ನು ನಿಭಾಯಿಸುತ್ತಾಳೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಕಂಡು ಬರುತ್ತಿಲ್ಲ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ :

2003ರ ಜೂ.8ರಂದು ಮೈಸೂರಿನ ಕೆ.ಆರ್ ನಗರದಲ್ಲಿ ದಂಪತಿಯ ಮದುವೆಯಾಗಿದ್ದರು. ವಿವಾಹದ ಬಳಿಕ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ, ಕೆಲ ವರ್ಷಗಳ ನಂತರ ಪತ್ನಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತೋರಿಸಿದಾಗ ಪತ್ನಿಯ ಗರ್ಭಕೋಶದಲ್ಲಿ ಗಂಭೀರ ಸಮಸ್ಯೆ ಇರುವುದು ತಿಳಿದುಬಂದಿತ್ತು. ವಾಸಿಯಾಗದ ಕಾಯಿಲೆಯಾಗಿದ್ದ ಕಾರಣ ಶಸ್ತ್ರಚಿಕಿತ್ಸೆ ವೇಳೆ ಗರ್ಭಕೋಶವನ್ನೇ ತೆಗೆದುಹಾಕಲಾಗಿತ್ತು. ಪತ್ನಿಗೆ ಮಕ್ಕಳಾಗುವುದಿಲ್ಲ ಎಂದು ತಿಳಿದ ನಂತರ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ವಿವಾಹ ಅನೂರ್ಜಿತಗೊಳಿಸಲು ಕೋರಿ ಗಂಡ 2008ರಲ್ಲಿ ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

2013ರ ಜ.3 ರಂದು ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯ, ಅರ್ಜಿ ಸಲ್ಲಿಸಿದ ದಿನದಿಂದ ಅನ್ವಯವಾಗುವಂತೆ ಪತ್ನಿಗೆ ಮಾಸಿಕ 3 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವೇ ಆಕೆಯ ಪರ ವಾದ ಮಂಡಿಸಲು ವಕೀಲೆ ಕೆ.ಎಂ.ಅರ್ಚನಾ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿತ್ತು.

ಪತ್ನಿ ವಿರುದ್ಧ ವಂಚನೆ ಆರೋಪ: ಪತಿಯ ಪರ ವಾದ ಮಂಡಿಸಿದ್ದ ವಕೀಲರು, ಗರ್ಭಕೋಶ ಸಮಸ್ಯೆ ಮುಚ್ಚಿಟ್ಟು ವಿವಾಹವಾಗಿರುವ ಪತ್ನಿ ವಂಚನೆ ಎಸಗಿದ್ದಾರೆ. ಅರ್ಜಿದಾರರು ಆರ್ಥಿಕವಾಗಿ ಸದೃಢವಾಗಿಲ್ಲ. ವೃದ್ಧ ತಾಯಿಯನ್ನು ನೋಡಿಕೊಳ್ಳಬೇಕಿದೆ. ಮೇಲಾಗಿ ಅರ್ಜಿದಾರರ ಪತ್ನಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಉದ್ಯೋಗ ಪಡೆದು ಸ್ವಂತ ಜೀವನ ರೂಪಿಸಿಕೊಳ್ಳಬಹುದಾಗಿದೆ. ಪತಿಯಿಂದ ಜೀವನಾಂಶ ಪಡೆಯುವ ಅವಶ್ಯಕತೆ ಇಲ್ಲ. ಆದ್ದರಿಂದ, ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.

ಕೋರ್ಟ್ ಆದೇಶ : ಪತಿಯ ವಾದವನ್ನು ಒಪ್ಪಲು ನಿರಾಕರಿಸಿರುವ ನ್ಯಾಯಮೂರ್ತಿಗಳು, ಪತ್ನಿ ತಮ್ಮ ಅನಾರೋಗ್ಯದ ವಿಷಯವನ್ನು ಮರೆಮಾಚಿ ವಂಚಿಸಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಪತಿ ಆರ್ಥಿಕವಾಗಿ ಸದೃಢವಾಗಿಲ್ಲ ಎಂದು ಹೇಳಲಾಗಿದೆ. ಆದರೆ, ಅಮಿಕಸ್ ಕ್ಯೂರಿ ಕಲೆ ಹಾಕಿರುವ ಮಾಹಿತಿ ಪ್ರಕಾರ ಅರ್ಜಿದಾರರಿಗೆ ಬೆಂಗಳೂರಿನಲ್ಲಿ 2 ಟೈಲರಿಂಗ್ ಶಾಪ್‌ಗಳಿದ್ದು ಪ್ರತಿ ದಿನ 3ರಿಂದ 5 ಸಾವಿರ ರೂ. ದುಡಿಯುತ್ತಿದ್ದಾರೆ. ಅವರ ಹೆಸರಿನಲ್ಲಿ ಸ್ಥಿರಾಸ್ತಿಗಳಿವೆ. ಅರ್ಜಿದಾರ ಪತಿಯ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದು, ಅವರ ಮರಣದ ನಂತರ ತಾಯಿಗೆ ಪಿಂಚಣಿ ಬರುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಉನ್ನತ ಶಿಕ್ಷಣ ಇದೆ ಎಂಬ ಮಾತ್ರಕ್ಕೆ ಪತ್ನಿಗೆ ಉದ್ಯೋಗ ಸಿಗುತ್ತದೆ. ಅದರಿಂದ, ಆಕೆ ಸ್ವತಃ ಜೀವನ ರೂಪಿಕೊಳ್ಳಬಹುದು. ಅದಕ್ಕಾಗಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂಬುದನ್ನು ಒಪ್ಪಲು ಆಗದು. ಇನ್ನು ಕೌಟುಂಬಿಕ ನ್ಯಾಯಾಲಯ ಘೋಷಿಸಿರುವ ಜೀವನಾಂಶದ ಮೊತ್ತ ಅರ್ಜಿದಾರ ಪತಿಗೆ ದೊಡ್ಡದಲ್ಲ. ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪಗಳು ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಪತಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಇನ್ನು ಪತ್ನಿ ಪರ ಅಮಿಕಸ್ ಕ್ಯೂರಿಯಾಗಿ ಕಾರ್ಯ ನಿರ್ವಹಿಸಿದ ವಕೀಲೆ ಕೆ.ಎಂ. ಅರ್ಚನಾ ಅವರಿಗೆ 4 ಸಾವಿರ ಗೌರವಧನ ನೀಡುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದೆ.

ABOUT THE AUTHOR

...view details