ಬೆಂಗಳೂರು:ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣ ಇಡಿ ಅಂಗಳ ತಲುಪಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಮುಂದಾಗಿದೆ.
ನವೆಂಬರ್ 2021ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಫೈಜಲ್, ಫಜಲ್, ಅಬ್ದುಲ್ ಮನಾಫ್, ಮೊಹಮ್ಮದ್ ಸಾಲಿ ಈ ನಾಲ್ವರಿಂದ ಕೋಟ್ಯಂತರ ರೂ. ಅಕ್ರಮ ವ್ಯವಹಾರ ನಡೆದಿತ್ತು. ಈ ಅಸಾಮಿಗಳು ಸುಮಾರು 2,886 ಅಕೌಂಟ್ಗಳಿಂದ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆಗಿದ್ದು ಬೆಳಕಿಗೆ ಬಂದಿತ್ತು.
ಸದ್ಯ ಅಕೌಂಟ್ ಫ್ರೀಜ್ ಮಾಡಿರುವ ಪುಟ್ಟೇನಹಳ್ಳಿ ಪೊಲೀಸರು, ಖಾತೆ ಹೋಲ್ಡರ್ಗಳ ವಿಚಾರಣೆ ನಡೆಸುತ್ತಿದ್ದಾರೆ. ಹಲವರಿಗೆ ನೋಟಿಸ್ ನೀಡಿದರೂ ಕೋವಿಡ್ ನೆಪ ನೀಡುತ್ತಿದ್ದಾರೆ. ಇತ್ತ ಇಡಿ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಇದೇ ಜಾಲ ರಾಜ್ಯವನ್ನು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹವಾಲಾ ದಂಧೆಯ ಕಿಂಗ್ಪಿನ್ಗಳಾದ ಕೇರಳ ಮೂಲಕ ರಿಯಾಜ್ ಹಾಗೂ ಮನಸ್ ಸಹೋದರರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಹವಾಲ ದಂಧೆ ಪ್ರಕರಣ: 800 ಬ್ಯಾಂಕ್ ಅಕೌಂಟ್ಗಳಿಂದ 70 ಕೋಟಿ ರೂ.ಚಲಾವಣೆ
ಬೆಂಗಳೂರಿನ ವಿವಿಧೆಡೆ ಕೋಟಿ ಕೋಟಿ ಹಣ ಪಡೆಯುತಿದ್ದ ನಾಲ್ವರು, ವಾಟ್ಸಾಪ್ನಲ್ಲಿ ರಿಯಾಜ್ ಕಳುಹಿಸುತ್ತಿದ್ದ ಅಕೌಂಟ್ಗೆ ಬ್ಯಾಂಕಿಗೆ ತೆರಳದೆ ಡೆಪಾಸಿಟ್ ಮಿಷಿನ್ ಮೂಲಕ ಜಮೆ ಮಾಡುತ್ತಿದ್ದರು. ಆದರೆ ಆ ಹಣ ಯಾರಿಗೆ ತಲುಪುತ್ತಿತ್ತು. ಯಾಕಾಗಿ ಆ ದುಡ್ಡು ಬಳಕೆ ಆಗ್ತಾ ಇತ್ತು ಅನ್ನೋದು ನಿಗೂಢವಾಗಿದ್ದು, ಇಡಿ ಪತ್ತೆ ಹಚ್ಚುತ್ತಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ