ನವದೆಹಲಿ/ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಎರಡನೇ ಬಾರಿಗೆ ಸಮನ್ಸ್ ನೀಡಿದ್ದರಿಂದ ಮಧ್ಯಪ್ರದೇಶ ಉಜ್ಜಯಿನಿಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇರವಾಗಿ ದೆಹಲಿಗೆ ಆಗಮಿಸಿದ್ದಾರೆ. ಇಂದು ಅವರು ಇಡಿ ಮುಂದೆ ವಿಚಾರಣೆ ಎದುರಿಸಲಿದ್ದಾರೆ.
ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ವಿಚಾರಣೆಯ ಬಳಿಕ ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿದ ಆರೋಪದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಲು ಇಡಿ ಕೆಲ ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಿತ್ತು.
ಪೂರ್ವ ನಿಗದಿತ ಕಾರ್ಯಕ್ರಮಗಳಿರುವ ಕಾರಣ 3 ವಾರಗಳ ಸಮಯ ಕೇಳಿದ್ದ ಡಿಕೆಶಿಗೆ ಮತ್ತೆ ಇಡಿ ತುರ್ತು ಸಮನ್ಸ್ ನೀಡಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷರು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಬಳಿಕ ನೇರವಾಗಿ ದೆಹಲಿಗೆ ಆಗಮಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ವಿಚಾರಣೆಗೆ 3 ವಾರಗಳ ಸಮಯ ಕೇಳಿದ್ದೆ. ಆದರೆ ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಮತ್ತೆ ಸಮನ್ಸ್ ನೀಡಿದ್ದಾರೆ. ಹೀಗಾಗಿ ನಾನು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಸನ್ನಿಧಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಸಾಂವಿಧಾನಿಕ ಸಂಸ್ಥೆಗಳಿಗೆ ಗೌರವ ನೀಡಿ, ವಿಚಾರಣೆ ಎದುರಿಸುವೆ ಎಂದು ಹೇಳಿದರು.