ಬೆಂಗಳೂರು: ಲಾಭಾಂಶ ನೀಡುವುದಾಗಿ ಗ್ರಾಹಕರಿಂದ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆ್ಯಪ್ ಆಧರಿತ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ದಾಳಿ ನಡೆಸಿದೆ. ಬೆಂಗಳೂರು, ಮುಂಬೈ, ದೆಹಲಿ, ಹರಿಯಾಣದ ಗುರ್ಗಾಂವ್, ಮತ್ತು ತಮಿಳುನಾಡಿನ ಸೇಲಂ ಸೇರಿ ವಿವಿಧೆಡೆ ನಡೆದ ದಾಳಿಯಲ್ಲಿ ಎಚ್.ಪಿ.ಜೆಡ್ ಟೋಕನ್ ಸೇರಿದಂತೆ ಮತ್ತಿತರ ಆ್ಯಪ್ ಆಧರಿತ ಕಂಪನಿಗಳ ಮೇಲೆ ಶೋಧಕಾರ್ಯ ನಡೆಸಲಾಗಿದೆ. ಇ.ಡಿ ಶೋಧಕಾರ್ಯ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿಯ ಮೇಲೆ ಹೂಡಿಕೆ ಮಾಡಿದರೆ ಲಾಭಾಂಶ, ಸಾಲ ಸೇರಿದಂತೆ ವಿವಿಧ ಆಮಿಷ ನೀಡಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸುತ್ತಿದ್ದ ಕೆಲ ವಂಚಕ ಕಂಪನಿಗಳು ಬಳಿಕ ಹೂಡಿಕೆದಾರರ ಸದಸ್ಯತ್ವ ರದ್ದುಗೊಳಿಸಿ ವಂಚಿಸುತ್ತಿದ್ದ ಆರೋಪ ಕೇಳಿ ಬಂದಿತ್ತು. ಎಚ್.ಪಿ.ಜೆಡ್ ಟೋಕನ್ ಕಂಪನಿ ಹಾಗೂ ಇತರ ಕಂಪನಿಗಳ ವಿರುದ್ಧ ನಾಗಾಲ್ಯಾಂಡ್ನ ಕೋಹಿಮಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಹಾಗೂ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಇ.ಡಿ ಪ್ರತ್ಯೇಕ ತನಿಖೆ ಆರಂಭಿಸಿತ್ತು.
ಎಚ್ಪಿಜೆಡ್ ಟೋಕನ್ ಆ್ಯಪ್ ಆಧರಿತ ಟೋಕನ್ ಆಗಿದ್ದು, ಬಿಟ್ ಕಾಯಿನ್ ಹಾಗೂ ಇತರ ಕ್ರಿಪ್ಟೋಕರೆನ್ಸಿಗಳ ಮೈನಿಂಗ್ ಮೆಷಿನ್ಸ್ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಗ್ರಾಹಕರಿಗೆ ಭರವಸೆ ನೀಡುತ್ತಿದ್ದವು. ಲಿಲಿಯನ್ ಟೆಕ್ನೋಕ್ಯಾಬ್ ಪ್ರೈ. ಲಿಮಿಟೆಡ್ ಮತ್ತು ಶಿಗೂ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಎನ್ನುವ ಎರಡು ಘಟಕಗಳು ಎಚ್ಪಿಜೆಡ್ ಟೋಕನ್ ಹೆಸರಿನಲ್ಲಿ ಹೂಡಿಕೆದಾರರಿಂದ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂಬುದು ಇಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.