ಬೆಂಗಳೂರು/ಮಂಡ್ಯ: ನಿವೇಶನ ವಿತರಿಸುವುದಾಗಿ ಜನರಿಂದ ಕಾನೂನು ಮೀರಿ ಹಣ ಸಂಗ್ರಹಿಸಿದೆ ಎಂಬ ಆರೋಪದ ಮೇಲೆ ಹಿಂದೂಸ್ತಾನ್ ಇನ್ಫ್ರಾಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ಐದು ಸ್ಥಳಗಳಲ್ಲಿ ಜೂನ್ 27ರಂದು ಜಾರಿ ನಿರ್ದೇಶನಾಲಯ (ಇಡಿ) ಶೋಧಕಾರ್ಯ ನಡೆಸಿದೆ. ಬೆಂಗಳೂರು ಹಾಗೂ ಮಂಡ್ಯದ ಒಟ್ಟು ಐದು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಕಂಪನಿಯ ನಗದು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
2010ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಹಿಂದೂಸ್ತಾನ್ ಇನ್ಫ್ರಾಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಾನೂನುಬಾಹಿರವಾಗಿ ಬಡ, ಮಧ್ಯಮ ವರ್ಗದ ಜನರಿಗೆ ನಿವೇಶನದ ಆಮೀಷವೊಡ್ಡಿ ಕಂತಿನಲ್ಲಿ ಹಣ ಪಡೆದಿದೆ ಎಂಬ ಆರೋಪ 2014-15ರ ಅವಧಿಯಲ್ಲಿ ಕೇಳಿ ಬಂದಿತ್ತು. ಕಂಪನಿ ಬರೋಬ್ಬರಿ 389 ಕೋಟಿ ರೂ ಸಂಗ್ರಹಿಸಿತ್ತು ಎಂದು ಸಿಐಡಿ ತನಿಖೆಯಲ್ಲೂ ಬಹಿರಂಗವಾಗಿತ್ತು. ಕಂಪನಿಯ ಮುಖ್ಯಸ್ಥರು, ನಿರ್ದೇಶಕರುಗಳಿಗೆ ಸೇರಿದ ಆಸ್ತಿ, ಬ್ಯಾಂಕ್ ಖಾತೆಯಲ್ಲಿರುವ ಹಣ ಸೇರಿದಂತೆ 34 ಕೋಟಿ ರೂ ಹಣವನ್ನ ಸಿಐಡಿ ಪೊಲೀಸರು ಜಪ್ತಿ ಮಾಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನ ಜಾರಿ ನಿರ್ದೇಶನಾಲಯ ಆರಂಭಿಸಿತ್ತು.
ಇದನ್ನೂ ಓದಿ:Fake Notes: ಆರ್ಬಿಐಗೆ ಸಲ್ಲಿಕೆಯಾದ ಕರೆನ್ಸಿ ಚೆಸ್ಟ್ನಲ್ಲಿ ನಕಲಿ ನೋಟುಗಳು ಪತ್ತೆ... ಬೆಂಗಳೂರಲ್ಲಿ ಪ್ರಕರಣ ದಾಖಲು
ಕಾರು ಗಿಫ್ಟ್ ಪಡೆದ ಆರೋಪ ನಟಿಯ ವಿಚಾರಣೆ ನಡೆಸಿದ ಇಡಿ:ಶಿಕ್ಷಕರ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಟಿಎಂಸಿ ಉಚ್ಚಾಟಿತ ಯುವ ನಾಯಕ ಕುಂತಲ್ ಘೋಷ್ ಅವರಿಂದ ಐಷಾರಾಮಿ ಕಾರು ಪಡೆದ ಆರೋಪ ಎದುರಿಸುತ್ತಿರುವ ನಟ ಬೋನಿ ಸೆಂಗುಪ್ತಾ ಅವರ ಬಳಿಕ ಈಗ ಮತ್ತೊಬ್ಬ ನಟಿ ಕೂಡ ಕಾರು ಗಿಫ್ಟ್ ಪಡೆದುಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ನಟಿ, ಟಿಎಂಸಿ ನಾಯಕಿಯಾಗಿರುವ ಸಯೋನಿ ಘೋಷ್ ಅವರನ್ನು 11 ಗಂಟೆಗಳ ಸುದೀರ್ಘ ವಿಚಾರಣೆಗೆ ಒಳಪಡಿಸಿದೆ.
ನಟ ಬೋನಿ ಸೆಂಗುಪ್ತಾ ಎಕ್ಸ್‌ಯುವಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಈ ಕುರಿತು ನಟನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಆರೋಪಿ ಕುಂತಲ್ ಟಾಲಿವುಡ್ ನಟಿ ಸಯೋನಿ ಘೋಷ್ ಅವರಿಗೂ ಎಕ್ಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿದುಬಂದಿದೆ. ನಟಿ ಗಿಫ್ಟ್ ಆಗಿ ಬಂದ ಕಾರಿನಲ್ಲಿ ಓಡಾಡಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಶಿಕ್ಷಕರ ನೇಮಕಾತಿ ಹಗರಣ ಬೆಳಕಿ ಬಂದ ತಕ್ಷಣ ಆರೋಪಿ ಕುಂತಲ್ ನೀಡಿದ ಕಾರು ಗಿಫ್ಟ್ ವಾಪಸ್ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಶುಕ್ರವಾರ ನಡೆದ ವಿಚಾರಣೆಯ ವೇಳೆ ಇಡಿ ತನಿಖಾಧಿಕಾರಿಗಳು ನಟಿ ಸಯೋನಿ ಘೋಷ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕುಂತಲ್ ಘೋಷ್ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದು ಯಾಕೆ ಎಂಬುದಕ್ಕೆ ಉತ್ತರ ಹುಡುಕುತ್ತಿದ್ದಾರೆ. ಆರೋಪಿ ಶೋರೂಂನಿಂದ ಅನಾಮಧೇಯವಾಗಿ ಕಾರು ಖರೀದಿ ಮತ್ತು ಇಎಂಐಅನ್ನು ಏಕೆ ಪಾವತಿಸುತ್ತಿದ್ದರು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.