ಬೆಂಗಳೂರು :ಅನಧಿಕೃತವಾಗಿ ಸರ್ಕಾರಿ ಜಮೀನು ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮಾಲೂರು ಶಾಸಕ ಕೆ. ವೈ ನಂಜೇಗೌಡ ಮತ್ತಿತರ ಆರೋಪಿಗಳಿಗೆ ಸಂಬಂಧಿಸಿದ 25 ಲಕ್ಷ ರೂ ನಗದು, 50 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ದಾಖಲೆಗಳನ್ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. 150 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಕಾಯ್ದೆ 2002 ರಡಿ ಇಡಿ ಅಧಿಕಾರಿಗಳು ಜನವರಿ 8 ರಂದು ಶೋಧ ಕಾರ್ಯಾಚರಣೆ ನಡೆಸಿದ್ದರು.
ಮಾಲೂರು ಶಾಸಕರಾಗಿರುವ ಕೆ. ವೈ ನಂಜೇಗೌಡ, ಮಾಲೂರು ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇತರ ಸದಸ್ಯರ ಸಹಕಾರದಿಂದ ಒಂದೇ ತಿಂಗಳ ಅವಧಿಯಲ್ಲಿ 150 ಕೋಟಿ ಮೌಲ್ಯದ ಸುಮಾರು 80 ಎಕರೆ ಜಮೀನು ಮಂಜೂರು ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಇದಕ್ಕಾಗಿ ನಕಲಿ ದಾಖಲೆಗಳು, ಪತ್ರಗಳನ್ನ ಸಲ್ಲಿಸಿರುವುದು ಪ್ರಾದೇಶಿಕ ಆಯುಕ್ತರ ತಪಾಸಣೆಯ ಸಂದರ್ಭದಲ್ಲಿ ತಿಳಿದು ಬಂದಿತ್ತು ಎಂದು ಆರೋಪಿಸಲಾಗಿತ್ತು. ಭಾರಿ ಪ್ರಮಾಣದ ಅಕ್ರಮ ಹಾಗೂ ಹಣ ವರ್ಗಾವಣೆ ಆರೋಪ ಕೇಳಿ ಬಂದ ಬಳಿಕ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿತ್ತು.