ಬೆಂಗಳೂರು: ಚೀನಾ ಮೂಲದ ಕಂಪನಿಗಳಿಗೆ ಸಹಕಾರ ನೀಡಿ ಅಕ್ರಮಕ್ಕೆ ಕಾರಣರಾದ ಸ್ಥಳೀಯ ಏಳು ಕಂಪನಿಗಳು ಹಾಗೂ ಐವರು ನಿರ್ದೇಶಕರ ಮೇಲೆ ಜಾರಿ ನಿರ್ದೇಶಾನಾಲಯವು (ಇ.ಡಿ) ಬೆಂಗಳೂರಿನ ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಿಸಿದೆ.
ಚೀನಾ ಮೂಲದ ಲೋನ್ ಆ್ಯಪ್ ಕಂಪನಿಗಳಿಗೆ ಅಕ್ರಮ ಎಸಗಲು ನೆರವು ನೀಡುತ್ತಿದ್ದ ಮ್ಯಾಡ್ ಎಲಿಫೆಂಟ್ ನೆಟ್‌ವರ್ಕ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್, ಬ್ಯಾರಿಯೊನಿಕ್ಸ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್, ಕ್ಲೌಡ್ ಅಟ್ಲಾಸ್ ಫ್ಯೂಚರ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಜಮ್ನಾದಾಸ್ ಮೊರಾರ್ಜಿ ಫೈನಾನ್ಸ್ ಪ್ರೈವೆಟ್ ಲಿಮಿಟೆಡ್ ಗೇಟ್‌ವೇ ಹಾಗೂ ರೇಜರ್‌ಪೇ ಸಾಫ್ಟ್‌ವೇರ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಹಾಗೂ ಐವರು ಕಂಪನಿ ನಿರ್ದೇಶಕರ ಮೇಲೆ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಗ್ರಾಹಕರನ್ನು ಸೆಳೆದು ಡಿಜಿಟಲ್ ಅಪ್ಲಿಕೇಶನ್ ಮುಖಾಂತರ ಲೋನ್ ಕಂಪನಿಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದವು. ಬಳಿಕ ಸಾಲ ವಸೂಲಿ ಸೋಗಿನಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದವು. ಈ ಸಂಬಂಧ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಕ್ರಮವಾಗಿ 77 ಕೋಟಿ ರೂಪಾಯಿ ವಸೂಲಿ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅಕ್ರಮವಾಗಿ ಕೋಟ್ಯಂತರ ಹಣ ವರ್ಗಾವಣೆ ಮಾಡಿರುವ ಸಂಬಂಧ ಇ ಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ತನಿಖೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಕಂಡು ಬಂದಿದ್ದರಿಂದ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಿಸಿದೆ.