ಬೆಂಗಳೂರು:ನಗರದಲ್ಲಿ ಚಿನ್ನದ ವ್ಯಾಪಾರಿಗಳು ಹಾಗೂ ಉದ್ಯಮಿಗಳ ಮನೆಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಹಾಗೂ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್. ಅಂಬಿಕಾಪತಿ ಹಾಗೂ ಪುತ್ರನ ಮೇಲೆ ದಾಳಿ ನಡೆಸಿದಾಗ ₹42 ಕೋಟಿ ಹಣ ದೊರೆತಿದ್ದು, ಈ ಸಂಬಂಧ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಅಪಾರ್ಟ್ಮೆಂಟ್ನ ಫ್ಲ್ಯಾಟ್‌ನಲ್ಲಿ ದಾಖಲಾತಿ ಇಲ್ಲದ 42 ಕೋಟಿ ಹಣ ದೊರೆತಿದೆ. ಈ ಬಗ್ಗೆ ಪರಿಶೀಲನೆ ವೇಳೆ ಸೂಕ್ತ ಲೆಕ್ಕಪತ್ರ ಇಲ್ಲದ ಕಾರಣ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಲ್ತಾನ್ ಪಾಳ್ಯ ಹಾಗೂ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಮನೆ ಸೇರಿದಂತೆ ಮೂರಕ್ಕಿಂತ ಹೆಚ್ಚು ಕಡೆಗಳಲ್ಲಿ ಗುರುವಾರ ರಾತ್ರಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲಿಸಿ ಮಹತ್ವದ ದಾಖಲಾತಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಂಬಿಕಾಪತಿ ಮಗ ಪ್ರದೀಪ್ಗೆ ಸೇರಿದ ಫ್ಲ್ಯಾಟ್‌ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ ವೇಳೆ ಮಂಚದ ಕೆಳಗೆ 23 ಬಾಕ್ಸ್ಗಳಲ್ಲಿ 500 ಮುಖಬೆಲೆಯ ನೋಟುಗಳ ಬಂಡಲ್ ಪತ್ತೆಯಾಗಿವೆ. 42 ಕೋಟಿ ಹಣ ಹಾಗೂ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಐಟಿ ಇಲಾಖೆಯ ಹಿರಿಯ ಅಧಿಕಾರಿ ಶ್ರೀನಿವಾಸ್ ರಾವ್ ನೇತೃತ್ವದ ತಂಡ ಪರಿಶೀಲಿಸಿ ಹಣವನ್ನು ಬಾಕ್ಸ್‌ನಲ್ಲಿ ತುಂಬಿ ಪ್ಯಾಕ್ ಮಾಡಿ, ಪೊಲೀಸ್ ಭದ್ರತೆಯೊಂದಿಗೆ ಹೆಬ್ಬಾಳದ ಎಸ್ಬಿಐ ಬ್ಯಾಂಕ್ ಶಾಖೆಗೆ ಪ್ರದೀಪ್ನನ್ನು ಕರೆದೊಯ್ದು ಆತನ ಸಮ್ಮುಖದಲ್ಲಿ ಹಣ ಜಮೆ ಮಾಡಿದ್ದಾರೆ. ಈ ಹಣದ ಮೂಲದ ಬಗ್ಗೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.