ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಹವಾಲ ದಂಧೆ ನಡೆಸಿರುವ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗೆ ಮಾಹಿತಿ ಲಭ್ಯವಾಗಿದ್ದು, ಇದೀಗ ರವಿ ಪೂಜಾರಿ ವಿಚಾರಣೆಗೆ ಇಡಿ ಸಿದ್ಧತೆ ನಡೆಸಿದೆ.
ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದ ಸೆನಗಲ್ ಪೂಜಾರಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು, ನಂತರ ಮಡಿವಾಳದ ಎಫ್ ಎಸ್ಎಲ್ ನಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ತನಿಖೆ ನಡೆಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು.
ತನಿಖೆ ವೇಳೆ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆ, ರಾಜಕೀಯ, ಸಿನಿಮಾ ಕ್ಷೇತ್ರದ ವ್ಯಕ್ತಿಗಳಿಗೆ ಪ್ರಾಣ ಬೆದರಿಕೆ ಹಾಕಿ ಅಕ್ರಮವಾಗಿ ಹಣ ಗಳಿಸಿ ಭಾರತದಿಂದ ಹೊರದೇಶಗಳಿಗೆ ಹಣ ರವಾನಿಸಿರುವ ಆರೋಪ ಈತನ ಮೇಲಿದೆ.
ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36 ಸೇರಿದಂತೆ ಸುಮಾರು 93ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕಳೆದ ಜನವರಿಯಲ್ಲಿ ರವಿ ಪೂಜಾರಿ ಆಪ್ತ ಗುಲಾಂ ಎಂಬಾತನನ್ನು ಬಂಧಿಸಿ 10 ದಿನಗಳ ಕಾಲ ವಿಚಾರಣೆ ನಡಿಸಿದಾಗ ಸಿಸಿಬಿ ಅಧಿಕಾರಿಗಳ ಎದುರು ರವಿ ಪೂಜಾರಿ ಅಕ್ರಮ ಹಣದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ಎನ್ನಲಾಗ್ತಿದೆ. ಸದ್ಯ ಇದರ ಆಧಾರದ ಮೇರೆಗೆ ಪರಪ್ಪನ ಅಗ್ರಹಾರಕ್ಕೆ ತೆರಳಿ ಪೂಜಾರಿಯ ವಿಚಾರಣೆಯನ್ನ ಇಡಿ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.