ಬೆಂಗಳೂರು: ಫ್ಲ್ಯಾಟ್, ಮನೆಗಳನ್ನು ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಡ್ರೀಮ್ಸ್ ಇನ್ಫ್ರಾ ಇಂಡಿಯಾ ಲಿ., ಟಿಜಿಎಸ್ ಸಂಸ್ಥೆಯ ಮಾಲೀಕರು ಮತ್ತು ಇತರರಿಗೆ ಸೇರಿದ 138.68 ಕೋಟಿ ರೂ. ಮೌಲ್ಯದ 16 ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಡ್ರೀಮ್ಸ್ ಇನ್ಫ್ರಾ ಇಂಡಿಯಾ ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ದಿಶಾ ಚೌಧರಿ ಮತ್ತು ಟಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮಂದೀಪ್ ಕೌರ್ ಮತ್ತಿತರಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ಸಂಸ್ಥೆಗಳ ವಿರುದ್ಧ ಮೊದಲು ಪಾಂಜಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಅರೋಪದಡಿ 125ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ಕೈಗೊಂಡಾಗ ಆರೋಪಿಗಳು ನಡೆಸಿರುವ ವಂಚನೆ ಬಯಲಾಗಿತ್ತು. ಪ್ರಕರಣದಲ್ಲಿ ದಿಶಾ ಚೌಧರಿ, ಮಂದೀಪ್ ಕೌರ್ ಮಾತ್ರವಲ್ಲದೇ, ಗೃಹ ಕಲ್ಯಾಣ್, ಸಚಿನ್ ನಾಯ್ಕ್ ಅಲಿಯಾಸ್ ಯೋಗೇಶ್ ಎಂಬುವವರು ಸಹ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿಗಳು ಬೆಂಗಳೂರು ಮತ್ತು ಸುತ್ತಮುತ್ತ ಕೈಗೆಟುಕುವ ಬೆಲೆಯ ಅಪಾರ್ಟ್‌ಮೆಂಟ್‌ಗಳನ್ನು ನೀಡುವ ಆಶ್ವಾಸನೆ ನೀಡಿ ಸಾರ್ವಜನಿಕರಿಂದ ದೊಡ್ಡ ಮೊತ್ತದ ಠೇವಣಿಯನ್ನು ತೆಗೆದುಕೊಳ್ಳುವ ಮೂಲಕ ವಂಚಿಸುತ್ತಿದ್ದರು. ಠೇವಣಿದಾರರ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ನಗದು ರೂಪದಲ್ಲಿ ಪಡೆಯುವುದು, ಸಂಬಂಧ ಇಲ್ಲದ ವ್ಯವಹಾರಗಳಿಗೆ ಠೇವಣಿದಾರರ ಹಣವನ್ನು ಬಳಕೆ ಮಾಡಿರುವುದು, ಬಾಲಿವುಡ್ ಚಲನಚಿತ್ರಗಳ ನಿರ್ಮಾಣದಂತಹ ಅವರ ವೈಯಕ್ತಿಕ ಕೆಲಸಕ್ಕೆ ಖರ್ಚು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಇ.ಡಿ ತಿಳಿಸಿದೆ.
ಇದನ್ನೂ ಓದಿ:ಬಂಧಿತ ಐಎಎಸ್, ಐಪಿಎಸ್ ಅಧಿಕಾರಿಗಳ ಅಮಾನತುಗೊಳಿಸಿ ಸರ್ಕಾರ ಆದೇಶ