ಬೆಂಗಳೂರು :ಜನರಿಗೆ ಮೊಬೈಲ್ ಆ್ಯಪ್‌ನಲ್ಲಿ ಸಾಲ ಕೊಟ್ಟು ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಚೀನಾ ದೇಶದ ಸಾಲದ ಆ್ಯಪ್ ಕಂಪನಿಗಳಿಗೆ ಸೇರಿದ 106 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ. ಆ್ಯಪ್‌ನಲ್ಲಿ ಗ್ರಾಹಕರಿಗೆ ಸಾಲ ನೀಡಿದ ಬಳಿಕ ಚಿತ್ರಹಿಂಸೆ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಈ ಆ್ಯಪ್‌ಗಳ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪ್ರಕರಣ ಸಂಬಂಧ ಲೇವಾದೇವಿ ವ್ಯವಹಾರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಅಧಿಕ ಬಡ್ಡಿ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಸಾಲದ ಆ್ಯಪ್ ಕಂಪನಿಗಳ ಮಾಲೀಕರಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿ 106 ಕೋಟಿ ರೂ ಹಣವಿದ್ದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಚೀನಾ ವ್ಯಕ್ತಿಗಳು ಸಾಲದ ಆ್ಯಪ್‌ಗಳನ್ನು ತೆರೆದು ಅದರ ಮೂಲಕ ಸಾಲ ಕೊಡಲು ಮುಂದಾಗಿದ್ದರು. ಇದಕ್ಕೆ ಸ್ಥಳೀಯರನ್ನು ಮಾಲೀಕರು, ನಿರ್ದೇಶಕರನ್ನಾಗಿ ಮಾಡಿ ಬ್ಯಾಂಕ್ ಖಾತೆಗಳನ್ನು ಅವರ ಹೆಸರಿನಲ್ಲಿ ತೆರೆದು ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಆದರೆ ವ್ಯವಹಾರದ ಸಂಪೂರ್ಣ ನಿಯಂತ್ರಣವನ್ನು ಚೀನಾದ ವ್ಯಕ್ತಿಗಳೇ ನಿರ್ವಹಿಸುತ್ತಿದ್ದರು.
ಸಾರ್ವಜನಿಕರಿಗೆ ಆ್ಯಪ್‌ನಲ್ಲಿ ಸಾಲ ಕೊಟ್ಟು ನಿಗದಿಗಿಂತ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಸಾಲ ಪಡೆದು ಗ್ರಾಹಕರು ಹಣ ಕೊಡದೇ ಇದ್ದರೆ ಗ್ರಾಹಕರ ಮೊಬೈಲ್‌ನಿಂದ ಕಳವು ಮಾಡಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಸಾಲಗಾರರ ತೇಜೋವಧೆ ಮಾಡುತ್ತಿದ್ದರು. ಇದರಿಂದ ಬೇಸತ್ತು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಬಿ ಮಿನರಲ್ಸ್ ಗಣಿ ಕಂಪನಿ ಮೇಲೆ ಇಡಿ ದಾಳಿ: ಅಕ್ರಮ ಗಣಿಗಾರಿಕೆಯ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು (ಇಡಿ) ಎಸ್‌ಬಿ ಮಿನರಲ್ಸ್ ಒಡೆತನದ ಎರಡು ಗಣಿ ಕಂಪನಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ 5.21 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿ.ಪಿ ಆನಂದ್ ಕುಮಾರ್, ಪಾಂಡುರಂಗ ಸಿಂಗ್, ಗೋಪಾಲ್ ಸಿಂಗ್ ಪಾಲುದಾರಿಕೆಯ ಎಸ್‌ಬಿ ಮಿನರಲ್ಸ್, ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ. ಮಿಥಿಲೇಶ್ವರ್ ಗಣಿ ಸಂಸ್ಥೆಗಳಿಗೆ ಸೇರಿದ 5.21 ಕೋಟಿ ರೂ. ಮೌಲ್ಯದ 6 ಸ್ಥಿರ ಆಸ್ತಿಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ :ಪಿಎಂ ಆವಾಸ್ ಯೋಜನೆಯಲ್ಲಿ ವಂಚನೆ.. ಔರಂಗಾಬಾದ್‌ನಲ್ಲಿ ಇಡಿ ದಾಳಿ