ನವದೆಹಲಿ: ಎರಡು ವರ್ಷಗಳ ಹಿಂದಿನ ಐಎಂಎ ಪ್ರಕರಣ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ನಡೆಸಿರುವ ದಾಳಿ 'ರಾಜಕೀಯ ಪ್ರೇರಿತ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಬಹಳ ಹಿಂದೆಯೇ ಇ.ಡಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ ಎರಡು ವರ್ಷಗಳ ನಂತರ ದೆಹಲಿ ಕಚೇರಿಯ ಇಡಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿರುವುದು ಆಶ್ಚರ್ಯ ಮೂಡಿಸಿದೆ. ಇದೊಂದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕಾರಣ, ಬೆಂಗಳೂರಿನಲ್ಲೇ ಇಡಿ ಕಚೇರಿ ಇದೆ. ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಹಿತಾಸಕ್ತಿ ಪ್ರೇರಿತ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡಿಕೊಂಡು, ಸಂಬಂಧಪಟ್ಟವರಿಗೆ ರಾಜಕೀಯ ತೊಂದರೆ ನೀಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಪಾಲಿಸುತ್ತ ಬಂದಿದೆ. ಇದನ್ನು ನಾವು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಇದು ದ್ವೇಷದ ರಾಜಕಾರಣ ಎಂದಿದ್ದಾರೆ.