ಬೆಂಗಳೂರು: ಎಲ್ಲರಿಗೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯಗಳನ್ನು ಮಾಡಲಾಗಿದೆ. ಆದರೂ, ಮತದಾನ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾದೇ ಇರುವ ಮತದಾರರಿಗೆ ವಿಎಫ್ಹೆಚ್(Vote-from-Home) ವಿಶೇಷ ಸೌಲಭ್ಯವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಪಾರದರ್ಶಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಆಯೋಗ ತಿಳಿಸಿದೆ.
ರಾಜ್ಯದಲ್ಲಿರುವ ಮತದಾರರೆಷ್ಟು?: ರಾಜ್ಯದಲ್ಲಿ ಒಟ್ಟು 5,21,76,579 ಕೋಟಿ ಮತದಾರರು ಇದ್ದಾರೆ. ಇದರಲ್ಲಿ 2,62,42,561 ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರು ಇದ್ದಾರೆ. 5,55,073 ವಿಶೇಷ ಚೇತನ ಮತದಾರರು, 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ 12,15,763 ಮತ್ತು 100 ವಯಸ್ಸು ದಾಟಿರುವ 16,976 ಮತದಾರರಿದ್ದಾರೆ. ಮೊದಲ ಬಾರಿಗೆ (18-19 ವಯಸ್ಸಿನ) 9,17,241 ಮತದಾರರು ನೋಂದಣಿಯಾಗಿದ್ದಾರೆ.
31 ಕಂದಾಯ ಜಿಲ್ಲೆಗಳಿದ್ದು, 34 ಚುನಾವಣಾ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ರಾಜ್ಯದ ಜನಸಂಖ್ಯೆ 2011 ರ ಜನಗಣತಿಯ ಪ್ರಕಾರ 6.1 ಕೋಟಿಯಿದ್ದು ಪುರುಷರು 3.09 ಕೋಟಿ (50.6%) ಮಹಿಳೆಯರು 3.01 ಕೋಟಿ (49.34%).224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ.
ತೃತೀಯ ಲಿಂಗಿಗಳಿಗೂ ಅವಕಾಶ:ರಾಜ್ಯದಲ್ಲಿ ಸುಮಾರು 42,756 ಜನ ತೃತೀಯ ಲಿಂಗಿಗಳಿದ್ದು, ಇವರಲ್ಲಿ 41,312 ಜನರನ್ನ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದೆ.