ಕರ್ನಾಟಕ

karnataka

By

Published : May 7, 2023, 9:14 PM IST

ETV Bharat / state

ಚುನಾವಣಾ ಜಾಹೀರಾತಿಗೆ ಆಯೋಗದ ಪೂರ್ವಾನುಮತಿ ಕಡ್ಡಾಯ: ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮಾರ್ಗಸೂಚಿ ಬಿಡುಗಡೆ

ಚುನಾವಣಾ ಜಾಹೀರಾತು ಪ್ರಸಾರ ಸಂಬಂಧ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ.

ಚುನಾವಣಾ ಆಯೋಗ
ಚುನಾವಣಾ ಆಯೋಗ

ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೀಡಿರುವ ಲಂಚದ ದರಪಟ್ಟಿ ಜಾಹೀರಾತನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ರಾಜಕೀಯ ಪಕ್ಷಗಳಿಗೆ ಸಲಹೆ ಸೂಚನೆ ನೀಡಿದೆ.‌ ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಮೇ 10 ರಂದು ಮತದಾನ ನಡೆಯಲಿದೆ. ಮುದ್ರಣ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಮತ್ತು ಕಾನೂನು ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸುತ್ತಿರುವುದನ್ನು ಕೇಂದ್ರ ಚುನಾವಣಾ ಆಯೋಗ ಗಮನಿಸಿದೆ. ಚುನಾವಣೆಯ ಅಂತಿಮ ಹಂತದಲ್ಲಿ ಇಂತಹ ಜಾಹೀರಾತುಗಳು ಇಡೀ ಚುನಾವಣಾ ಪ್ರಕ್ರಿಯೆಯನ್ನು ಕಲುಷಿತಗೊಳಿಸುವ ಸಾಧ್ಯತೆಯಿದ್ದು, ಇದರಿಂದ ಬಾಧಿತರಾದ ಅಭ್ಯರ್ಥಿಗಳು ಮತ್ತು ಪಕ್ಷಗಳು ಅವುಗಳಿಗೆ ಸ್ಪಷ್ಟೀಕರಣ ಅಥವಾ ಖಂಡಿಸುವ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ ಎಂದು ತಿಳಿಸಿದೆ.

ಈ ಹಿನ್ನೆಲೆ ಪ್ರಚೋದಿಸುವ, ದಾರಿತಪ್ಪಿಸುವ ಮತ್ತು ದ್ವೇಷಪೂರಿತವಾದ ಜಾಹೀರಾತುಗಳನ್ನು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವುದನ್ನು ತಡೆಯಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮವಹಿಸುವ ಸಲುವಾಗಿ ಮತದಾನದ ದಿನ ಹಾಗೂ ಮತದಾನ ಪೂರ್ವ ದಿನದಂದು ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ವ್ಯಕ್ತಿ ಅಥವಾ ಯಾವುದೇ ಸಂಘಟನೆಗಳು, ತಮ್ಮ ರಾಜಕೀಯ ಜಾಹೀರಾತುಗಳ ವಿಷಯ (content) ವನ್ನು ರಾಜ್ಯ ಮಟ್ಟದ / ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಯ ಪೂರ್ವಾನುಮತಿ ಪಡೆಯುವುದನ್ನು ಕೇಂದ್ರ ಚುನಾವಣಾ ಆಯೋಗವು ಸಂವಿಧಾನದ ಅನುಚ್ಛೇದ 324 ರಂತೆ ಹಾಗೂ ಅದರಿಂದ ಪ್ರದತ್ತವಾಗುವ ಅಧಿಕಾರದಡಿ ಕಡ್ಡಾಯಗೊಳಿಸಿದೆ. ಮತದಾನದ ದಿನ ಮೇ 10 ಹಾಗೂ ಮತದಾನದ ಪೂರ್ವ ದಿನ ಮೇ 9 ರಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ರಾಜಕೀಯ ಜಾಹೀರಾತುಗಳಿಗೆ ಈ ನಿಯಮ ಅನ್ವಯಿಸುತ್ತದೆ ಎ‌ಂದು ಸ್ಪಷ್ಟಪಡಿಸಿದೆ.

ಮೇ 9 ಹಾಗೂ 10 ರಂದು ಮುದ್ರಣ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ವ್ಯಕ್ತಿಯು ಅಥವಾ ಯಾವುದೇ ಸಂಘಟನೆಗಳು 48 ಗಂಟೆಗಳ ಮುನ್ನ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಮೇ 9 ಹಾಗೂ 10 ರಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ರಾಜಕೀಯ ಪಕ್ಷಗಳು ರಾಜ್ಯಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಅಥವಾ ಚುನಾವಣಾ ಅಭ್ಯರ್ಥಿಗಳು ಆಯಾ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಲ್ಲಿ ಜಾಹೀರಾತುಗಳ ಪೂರ್ವಾನುಮತಿಯನ್ನು ಪಡೆಯಬಹುದಾಗಿದೆ ಎಂದಿದೆ.

ಚುನಾವಣಾ ಜಾಹೀರಾತುಗಳ ಪೂರ್ವಾನುಮತಿ ಕಾರ್ಯವನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯು ತ್ವರಿತವಾಗಿ ನಿರ್ವಹಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಮೇಲಿನ ನಿರ್ದೇಶನವನ್ನು ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಚುನಾವಣಾ ಅಭ್ಯರ್ಥಿಗಳು ಹಾಗೂ ರಾಜ್ಯದ ಎಲ್ಲ ಮುದ್ರಣ ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಚುನಾವಣಾ ಆಯೋಗ ಮಾರ್ಗಸೂಚಿ :ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇತ್ತ ಚುನಾವಣಾ ಜಾಹೀರಾತು ಪ್ರಸಾರ ಸಂಬಂಧ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ. ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಟಿವಿ, ಸಿನಿಮಾಟೋಗ್ರಾಫ್, ದೃಶ್ಯಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126 ರ ಪ್ರಕಾರ ನಿಷೇಧಿಸಲಾಗಿದೆ. ಚುನಾವಣಾ ಸಂಬಂಧಿ ವಿಷಯ ಎಂದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವಂತಹ ವಿಷಯಗಳಾಗಿರುತ್ತವೆ. ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ ಎಂದು ತಿಳಿಸಿದೆ.

ಟಿವಿ/ರೇಡಿಯೋ/ಕೇಬಲ್ ನೆಟ್​ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನಪೂರ್ವ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿತ ವಿಷಯಗಳು ಪ್ರಸಾರ ಮಾಡದಂತೆ ಕ್ರಮವಹಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರು (ಪ್ಯಾನಲಿಸ್ಟ್) ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿರುವ ಅಭಿಪ್ರಾಯಗಳು/ಮನವಿಗಳು ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಕೂಡ ಪ್ರಸಾರ ಮಾಡಕೂಡದು ಎಂದು ಸೂಚಿಸಿದೆ.

ನಿಗದಿತ 48 ಗಂಟೆಗಳ ಅವಧಿಯಲ್ಲಿ ಓಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು, ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವುದು. ಅದೇ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ಕೂಡ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 126 ರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ವಿವರಿಸಿದೆ‌.

ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಅಂಗವಾಗಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದ್ದರಿಂದ ಎಲ್ಲ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮಗಳು ಮೇ 8 ರ ಸಂಜೆ 6 ಗಂಟೆಯಿಂದ ಮೇ 10 ರ ಸಂಜೆ 6.30 ಗಂಟೆಯವರೆಗೆ ಈ ನಿರ್ದೇಶನಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

ಇದನ್ನೂ ಓದಿ :ಪ್ರಧಾನಿ ಬೆಂಗಳೂರು ರೋಡ್ ಶೋಗೆ ತೆರೆ; ಎರಡು ದಿನ ಒಟ್ಟು 32.5 ಕಿ.ಮೀ. ಮೋದಿ ಮೋಡಿ ಮೂಲಕ ಮತಬೇಟೆ

ABOUT THE AUTHOR

...view details