ಬೆಂಗಳೂರು :2022ನೇ ವರ್ಷವು ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ವರ್ಷವಾಗಿದ್ದು, ಅನೇಕ ಗಮನಾರ್ಹ ಸಾಧನೆಗಳಾಗಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ವರ್ಷದ ಸಾಧನೆಗಳ ಮಾಹಿತಿಯನ್ನು ಮಾಧ್ಯಮ ಹೇಳಿಕೆಯಲ್ಲಿ ಹಂಚಿಕೊಂಡಿರುವ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಎಲ್ಲರಿಗೂ ಆರೋಗ್ಯದ ಹಕ್ಕು ನೀಡಲಾಗಿದೆ. ಕರ್ನಾಟಕವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆರೋಗ್ಯ ವಲಯದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ.
ಯಾವುದೇ ರಾಜ್ಯದ ಆರೋಗ್ಯದ ಮಾನದಂಡ ಅಳೆಯಲು ತಾಯಿ ಮತ್ತು ಶಿಶು ಮರಣ ಅಳತೆಗೋಲು. ತಾಯಿ-ಶಿಶು ಮರಣ ದರ ಶೇ 83 ರಿಂದ 69ಕ್ಕೆ, ಎನ್.ಎಫ್.ಎಚ್.ಎಸ್ -5 ವರದಿ ಪ್ರಕಾರ, ಜನನದ ಸಮಯದಲ್ಲಿ ಲಿಂಗಾನುಪಾತ 910 ರಿಂದ 978 ಕ್ಕೆ, ಶಿಶು ಮರಣ ದರ 21 ರಿಂದ 19ಕ್ಕೆ, ನವಜಾತ ಶಿಶುಗಳ ಮರಣ ದರ 16 ರಿಂದ 14ಕ್ಕೆ ತಗ್ಗಿದೆ. ಹೆರಿಗೆ ವಲಯದಲ್ಲೂ ಸುಧಾರಣೆಯಾಗಿದ್ದು, 97% ರಷ್ಟು ಸಾಂಸ್ಥಿಕ ಹೆರಿಗೆಗಳು ದಾಖಲಾಗಿರುವುದು ಮಹತ್ವದ ಸಂಗತಿ. ಕಿವುಡ ಮುಕ್ತ ಕರ್ನಾಟಕʼದಡಿ ನವಜಾತ ಶಿಶುಗಳಲ್ಲಿ ಶ್ರವಣದೋಷ ಪತ್ತೆ ಮಾಡಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ.
ಲಕ್ಷ್ಯ ಕಾರ್ಯಕ್ರಮದಡಿ 68% ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ, 55 ಸೌಲಭ್ಯಗಳನ್ನು ರಾಷ್ಟ್ರ ಮಟ್ಟದಲ್ಲಿ ಪ್ರಮಾಣೀಕರಿಸಲಾಗಿದೆ. 42,524 ಆಶಾ ಕಾರ್ಯಕರ್ತೆಯರಿಗೆ ಮಂಜೂರಾತಿ, ವಿಶ್ವ ಆರೋಗ್ಯ ಸಂಸ್ಥೆ ಪೋರ್ಟಲ್ನಲ್ಲಿ ಅನುಷ್ಠಾನ ಮತ್ತು ವರದಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಇ-ಸಂಜೀವಿನಿ ಟೆಲಿ-ಮೆಡಿಸಿನ್ ಸಮಾಲೋಚನೆಯಡಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಹೊರರೋಗಿ ಮಾದರಿಯ ಟೆಲಿ-ಸಮಾಲೋಚನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ನವೆಂಬರ್ವರೆಗೆ 61.99 ಲಕ್ಷ ಟೆಲಿ ಸಮಾಲೋಚನೆ ನಡೆಸಲಾಗಿದೆ.
ರಾಜ್ಯ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆಯ ಇ-ಮನಸ್ ನ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಸಮಾಲೋಚನೆಯಡಿ ಮಹತ್ವದ ಸಾಧನೆಯಾಗಿದೆ. ಗುಜರಾತ್ನಲ್ಲಿ ಮೇ ನಲ್ಲಿ ನಡೆದ “ಸ್ವಾಸ್ಥ್ಯ ಚಿಂತನ ಶಿಬಿರ”ದಲ್ಲಿ ಇ-ಮನಸ್ ಕುರಿತು ರಾಜ್ಯದ ಅತ್ಯುತ್ತಮ ಅಭ್ಯಾಸಗಳನ್ನು ಪ್ರಸ್ತುತಪಡಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ತಜ್ಞರ ಸೇವೆಯನ್ನು ಬಡವರಿಗೆ ಒದಗಿಸಲು ಮತ್ತು ವೈದ್ಯರಿಂದ ತ್ವರಿತ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಟೆಲಿ ಮೆಡಿಸನ್ ವ್ಯವಸ್ಥೆಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾರಿಗೊಳಿಸಲಾಗಿದೆ.
32,00 ಸಾಮಾನ್ಯ ವೈದ್ಯರು, 600 ತಜ್ಞ ವೈದ್ಯರು ಮತ್ತು 100 ಸೂಪರ್ ಸ್ಪೆಷಾಲಿಟಿ ವೈದ್ಯರು ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪಾಳಿಗಳಲ್ಲಿ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ. ಟೆಲಿಮೆಡಿಸಿನ್ ಮೂಲಕವೂ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಡಿ.ಎನ್.ಬಿ ಕೋರ್ಸ್ಗಳನ್ನು, ತಾಲ್ಲೂಕು ಆಸ್ಪತ್ರೆಗಳಲ್ಲಿ ಡಿ.ಎನ್.ಬಿ ಮತ್ತು ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. 2020-21 ರಲ್ಲಿ ಕಾಯಕಲ್ಪ ಪ್ರಶಸ್ತಿಯನ್ನು 8 ಎಚ್.ಡಬ್ಲ್ಯೂ.ಸಿಗಳು ಮೊದಲ ಬಾರಿಗೆ ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಎನ್.ಕ್ಯೂ.ಎ.ಎಸ್ ಪ್ರಕಾರ ಒಟ್ಟು 51 ಸಾರ್ವಜನಿಕ ಆರೋಗ್ಯ ಸೌಲಭ್ಯ ಕೇಂದ್ರಗಳನ್ನು ಪ್ರಮಾಣೀಕರಿಸಲಾಗಿದೆ.
ಮೊದಲ ಹಂತದಲ್ಲಿ 114 “ನಮ್ಮ ಕ್ಲಿನಿಕ್”ಗಳನ್ನು ಆರಂಭಿಸಿದ್ದು. 128 ಮಹಿಳಾ ಕ್ಲಿನಿಕ್ಗಳು ಮತ್ತು ನಗರ ಪ್ರದೇಶಗಳಲ್ಲಿ 128 ಪಾಲಿಕ್ಲಿನಿಕ್ಗಳು ಕಾರ್ಯಾರಂಭ ಮಾಡುವ ಹಂತದಲ್ಲಿವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ನಾಗರಿಕ ಸಹಾಯವಾಣಿ ಆರಂಭಿಸುತ್ತಿದ್ದು, ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೂ ಇದನ್ನು ವಿಸ್ತರಿಸಲಾಗುತ್ತಿದೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ತಾಯಿ ಎದೆಹಾಲು ಬ್ಯಾಂಕ್ ಸ್ಥಾಪನೆ ಮತ್ತು ಪ್ರಾದೇಶಿಕವಾರು ಹೆಚ್ಚುವರಿಯಾಗಿ 4 ತಾಯಿ ಎದೆಹಾಲು ಬ್ಯಾಂಕ್ ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.ಯಕೃತ್ತಿನ ಉರಿಯೂತದ ಉಚಿತ ರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಆರೋಗ್ಯ ನಂದನ:ಕೋವಿಡ್ ಸಾಂಕ್ರಾಮಿಕದ ನಡುವೆ ಮಕ್ಕಳ ಪರೀಕ್ಷೆ, ಸ್ವಾಸ್ಥ್ಯ ಕಿರಣ ಆನ್ಲೈನ್ ವರದಿ ಮತ್ತು ಜಾಡು ಪತ್ತೆ ವ್ಯವಸ್ಥೆಯ ಅನುಷ್ಠಾನದ ಮೂಲಕ 65 ಲಕ್ಷ ಮಕ್ಕಳನ್ನು ತಪಾಸಣೆ ಮಾಡಲಾಗಿದೆ. ಗ್ರಾಮೀಣ ಮಕ್ಕಳ ಆರೋಗ್ಯ ರಕ್ಷಣೆಗೆ “ಆರೋಗ್ಯನಂದನ” ದ ಮೂಲಕ ಮಕ್ಕಳ ವೈದ್ಯರೊಂದಿಗೆ ಆರ್.ಬಿ.ಎಸ್.ಕೆ ತಂಡ ಪ್ರತಿದಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು, 1.7 ಕೋಟಿ ಪೈಕಿ 69,21,179 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ.