ಬೆಂಗಳೂರು: ಇಲಾಖೆಯಲ್ಲಿ ನೂತನ ತಂತ್ರಜ್ಞಾನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ಮೂಲಕ ದೇಶದಲ್ಲೇ ಮೊದಲು ಎಂಬ ಖ್ಯಾತಿ ಹೊಂದಿರುವ ಬೆಂಗಳೂರು ಪೊಲೀಸರು, ತಮ್ಮ ಇಲಾಖೆಯಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಮಾದರಿಯಾಗಿದ್ದಾರೆ.
ಕಾಗದ ರಹಿತವಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿನ ಹಳೆಯ ಸಾಂಪ್ರದಾಯಿಕ ಅಂಕಿ-ಅಂಶ, ದಾಖಲೆಗಳನ್ನು ಭೌತಿಕ ಕಡತಗಳ ರೂಪದಲ್ಲಿರಿಸುವ ಪ್ರಕ್ರಿಯೆಗೆ ಗುಡ್ ಬೈ ಹೇಳಲಾಗಿದ್ದು, ಅದರ ಬದಲು ಡಿಜಿಟಲ್ ರೂಪದಲ್ಲಿ ಕಡತಗಳನ್ನು ನಿರ್ವಹಿಸುವ ವ್ಯವಸ್ಥೆಗೆ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಚಾಲನೆ ನೀಡಲಾಗಿದೆ.
ಇಲಾಖೆಯಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿ:ರಾಜ್ಯ ಸರ್ಕಾರದ ಆದೇಶದಂತೆ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಅಪರಾಧ ಹಾಗೂ ಆಡಳಿತ ವಿಭಾಗದಲ್ಲಿ ಸಂಪೂರ್ಣವಾಗಿ ಇ-ಆಫೀಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಂದರೆ ಈ ಮೊದಲಿನಂತೆ ಕಾಗದ ರೂಪದಲ್ಲಿ ಭೌತಿಕ ದಾಖಲೆಗಳ ಬದಲು ಗಣಕೀಕೃತ ಡಿಜಿಟಲ್ ಫೈಲ್ ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಯಾವುದೇ ಅಧಿಕಾರಿ ಭೌತಿಕವಾಗಿ ಕಡತಗಳನ್ನು ಉಪಯೋಗಿಸುವಾಗ, ಏಕೆ ಎಂದು ವಿವರಣೆ ನೀಡಬೇಕು. ಎರಡನೇ ಹಂತವಾಗಿ ನಗರದ ಎಲ್ಲಾ ಡಿಸಿಪಿಗಳ ಕಚೇರಿಯಲ್ಲಿಯೂ ಇ-ಆಫೀಸ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಡಿಸಿಪಿ ಕಚೇರಿಗಳಿಂದ ಬರುವ ಕಡತಗಳನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದ ಟಪಾಲು ಶಾಖೆಯನ್ನು ಮುಚ್ಚಲಾಗಿದ್ದು, ಅಲ್ಲಿನ ಸಿಬ್ಬಂದಿಯನ್ನು ಪರ್ಯಾಯ ಕೆಲಸಗಳಿಗೆ ನಿಯೋಜಿಸಲಾಗಿದೆ.