ಬೆಂಗಳೂರು :ಸೆಪ್ಟೆಂಬರ್ 19ರಂದು ರಾಜ್ಯದಲ್ಲಿ ನಡೆದಿದ್ದ ಇ-ಲೋಕ ಅದಾಲತ್ ಅದ್ಭುತ ಯಶಸ್ಸು ಕಂಡಿದೆ. ಈ ಸಾಧನೆಗೆ ಕಾರಣರಾದ ನ್ಯಾಯಾಂಗ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕರ್ನಾಟಕ ರಾಜ್ಯ ಕಾನೂನ ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅಭಿನಂದಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾ. ಅರವಿಂದ್ ಕುಮಾರ್ ಅವರು, ರಾಜ್ಯದ 875 ನ್ಯಾಯಪೀಠಗಳಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ನಲ್ಲಿ ಒಟ್ಟು 1,15, 925 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಲೋಕ ಅದಾಲತ್ ಮೂಲಕ ಈ ದಾಖಲೆ ಯಶಸ್ಸು ಸಾಧಿಸಲು ಕಾರಣರಾದ ಎಲ್ಲ ನ್ಯಾಯಮೂರ್ತಿಗಳು, ನ್ಯಾಯಾಧೀಶರು ಹಾಗೂ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಮೆಗಾ ಇ-ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲು ಮೊದಲಿಗೆ 2 ಲಕ್ಷದ 31 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ ಮಾಡಲಾಗಿತ್ತು. ಮೋಟಾರು ವಾಹನ ಅಪಘಾತ, ಚೆಕ್‌ಬೌನ್ಸ್, ಕೌಟುಂಬಿಕ ದೌರ್ಜನ್ಯ ಪ್ರಕರಣ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣ ಸೇರಿದಂತೆ ಸಾಕಷ್ಟು ವಿಚಾರಣಾ ಪೂರ್ವ ಪ್ರಕರಣಗಳನ್ನು ಗುರುತಿಸಿದ್ದೆವು. ಅದರಂತೆ ರಾಜ್ಯದೆಲ್ಲೆಡೆ ಕಾರ್ಯ ನಿರ್ವಹಿಸಿದ ಜನತಾ ನ್ಯಾಯಾಲಯಗಳಲ್ಲಿ ಒಟ್ಟು 1.15 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ದಾಖಲೆ ಬರೆದ ಇ-ಲೋಕ ಅದಾಲತ್ಗೆ ಅಭಿನಂದನೆ ಸಲ್ಲಿಸಿದ ನ್ಯಾ. ಅರವಿಂದ್ ಕುಮಾರ್ ದಂಡ ಕಟ್ಟಿ ಇತ್ಯರ್ಥಪಡಿಸಿಕೊಳ್ಳುವ ಪ್ರಕರಣಗಳಲ್ಲಿ ಒಟ್ಟು 27.33 ಕೋಟಿ ರೂಪಾಯಿ ದಂಡವನ್ನು ಸರ್ಕಾರಕ್ಕೆ ಸಂಗ್ರಹಿಸಿಕೊಡಲಾಗಿದೆ. 357.64 ಕೋಟಿ ರೂಪಾಯಿ ಹಣ ಸಂತ್ರಸ್ತರಿಗೆ ಪರಿಹಾರವಾಗಿ ಸಿಕ್ಕಿದೆ ಎಂದು ವಿವರಿಸಿದರು. ಇದೇ ವೇಳೆ ನ್ಯಾ. ಅರವಿಂದ್ ಕುಮಾರ್ ಇ-ಲೋಕ ಅದಾಲತ್ ಅಭಿಯಾನಕ್ಕೆ ಬೆಂಬಲ ನೀಡಿದ ಮಾಧ್ಯಮಗಳಿಗೂ ಧನ್ಯವಾದ ತಿಳಿಸಿದರು.