ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗಳಿಂದ ಪೊಲೀಸ್ ಅಧಿಕಾರಿಗೆ ಕಿರುಕುಳ ಆರೋಪ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ, ಗೃಹ ಸಚಿವ ಹಾಗೂ ರಾಜ್ಯಪಾಲರಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ.
ಸಿಐಡಿ ಕ್ರಿಮಿನಲ್ ಇನ್ವೆಸ್ಟಿಗೇಷನ್ (ಸಿಐಯು)ಮಂಗಳೂರು ವಿಭಾಗದ ಡಿವೈಎಸ್ ಪಿ.ರತ್ನಾಕರ್ ಎಂಬುವವರು ಉದ್ದೇಶ ಪೂರ್ವಕವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಎರಡು ಬಾರಿ ನನಗೆ ಹಿಂಬಡ್ತಿ ನೀಡಿದ್ದಾರೆ ಎಂದು ಆರೋಪಿಸಿ ಡಿಜಿಪಿ, ಎಡಿಜಿಪಿ ಸೇರಿದಂತೆ ಐಪಿಎಸ್ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
2013 ರ ಜೂನ್ನಲ್ಲಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಟ್ರಿನಿಟಿ ಸರ್ಕಲ್ ಐಶಾರಾಮಿ ಕಾರು ಅಪಘಾತವಾಗಿತ್ತು. ಅಪಘಾತದಲ್ಲಿ ರಾಬರ್ಟ್ ಎಂಬಾತ ಮೃತಪಟ್ಟಿದ್ದ ಪ್ರಕರಣದಲ್ಲಿ ರಾಜಕೀಯ ಮುಖಂಡ ಪುತ್ರನ ಬಂಧನವಾಗಿತ್ತು. ಘಟನಾ ಸ್ಥಳಕ್ಕೆ ಕೂಡಲೇ ತೆರಳದೆ ಕರ್ತವ್ಯ ಲೋಪವಾಗಿದೆ ಎಂದು ಠಾಣಾ ಇನ್ಸ್ಸ್ಪೆಕ್ಟರ್ ರತ್ನಾಕರ್ ಮೇಲೆ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣದಲ್ಲಿ ನಾನು ತಪ್ಪು ಮಾಡದೇ ಹೋದರೂ ಸುಳ್ಳು ಆರೋಪ ಮಾಡಿ, ಮಾನಸಿಕವಾಗಿ ಹಿಂಸೆ ನೀಡಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಎರಡು ಬಾರಿ ಹಿಂಬಡ್ತಿ ನೀಡಲು ಹಿರಿಯ ಐಪಿಎಸ್ ಅಧಿಕಾರಿಗಳು ಕಾರಣರಾಗಿದ್ದರು. ದೂರಿನ ಪ್ರತಿಯಲ್ಲಿ 11 ಪ್ರಶ್ನೆಗಳನ್ನಿಟ್ಟು ಇನ್ನೊಂದು ತಿಂಗಳಲ್ಲಿ ಉತ್ತರಿಸದೇ ಇದ್ದಲ್ಲಿ ಸೇವೆಗೆ ವಿದಾಯ ಹೇಳುವುದಾಗಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.