ಬೆಂಗಳೂರು: ಗದಗ ಜಿಲ್ಲೆಯಲ್ಲಿ ಸಿಎಂ ಬಿಎಸ್ವೈ ಕಾರಿಗೆ ಪೊಲೀಸರು ದಾರಿ ಮಾಡಿಕೊಡುವಾಗ ನಡೆದ ಸಣ್ಣ ನೂಕಾಟವನ್ನು ಜನರ ಮೇಲೆ ಲಾಠಿ ಚಾರ್ಜ್ ನಡೆದಿದೆ ಎನ್ನುವಂತೆ ಕೆಲ ಮಾಧ್ಯಮಗಳು ತೋರಿಸುತ್ತಿವೆ. ಹೀಗೆ ತಪ್ಪು ಸಂದೇಶ ನೀಡಬಾರದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಟ್ವೀಟ್ ರಾಜ್ಯದ ಮುಖ್ಯಮಂತ್ರಿ, ಚುನಾಯಿತ ಪ್ರತಿನಿಧಿಗಳು ಹಗಲು-ರಾತ್ರಿ ತಂಡೋಪತಂಡವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಸಣ್ಣ ವ್ಯತ್ಯಾಸಗಳು ಆಗುವುದು ಸಹಜ ಎಂದು ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಈ ಸಮಯದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಅತ್ಯಂತ ಹೆಚ್ಚಿನ ತಾಳ್ಮೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಪ್ರವಾಹ ಪೀಡಿತ ಸಂತ್ರಸ್ತರ ಜೊತೆ ಸಹನೆಯಿಂದ ವರ್ತಿಸಬೇಕು. ಮಾಧ್ಯಮಗಳು ನಿಸ್ವಾರ್ಥವಾಗಿ ಜನರಿಂದ ಅಗತ್ಯ ವಸ್ತು ಸಂಗ್ರಹಿಸಿ, ಸಂತ್ರಸ್ತರಿಗೆ ತಲುಪಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಕೆಲಸ ಎಂದು ಸದಾನಂದ ಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳು ಕೂಡ ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಮುಖ್ಯಮಂತ್ರಿ ಅವರ ಜೊತೆ ಕೈ ಜೋಡಿಸಬೇಕೆಂದು ವಿನಂತಿಸಿ ಕೇಂದ್ರ ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ.