ಬೆಂಗಳೂರು:ಸಿದ್ದರಾಮಯ್ಯ ಅವರನ್ನು ಹಡಗಿನಲ್ಲಿ ಅಂಡಮಾನ್ ನಿಕೋಬಾರ್ಗೆ ಕಳುಹಿಸಿ ಅಲ್ಲಿನ ಜೈಲಿನ ಸ್ಥಿತಿಗತಿ ನೋಡಿಕೊಂಡು ಬರಲಿ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಟಾಂಗ್ ನೀಡಿದ್ದಾರೆ.
ವೀರ ಸಾವರ್ಕರ್ಗೆ ಭಾರತ ರತ್ನ ನೀಡುತ್ತಿರುವುದನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರೋಧಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಸಾವರ್ಕರ್ ವಾಸವಿದ್ದ ಜೈಲಿನ ಕೋಣೆ ಸ್ಥಿತಿಗತಿ ನೋಡಿಕೊಂಡು ಸಿದ್ದರಾಮಯ್ಯ ಬರಬೇಕು. ಆವಾಗ ಸಿದ್ದರಾಮಯ್ಯರ ಕೆಟ್ಟ ಬುದ್ಧಿ ಸರಿ ಹೋಗುತ್ತದೆ. ಅಲ್ಲಿನ ವಾತಾವರಣ ನೋಡಿದರೆ ಸಿದ್ದರಾಮಯ್ಯಗೆ ವಾಸ್ತವದ ಅರಿವಾಗಬಹುದು ಎಂದು ಕಿಡಿಕಾರಿದರು.
ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಸಿದ್ದರಾಮಯ್ಯ ಅವರು ಈ ರೀತಿಯ ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರನ್ನು ಸಹಿಸಿಕೊಂಡಿರುವುದೇ ದೊಡ್ಡ ವಿಚಾರ. ಚರಿತ್ರೆಯನ್ನು ಮತ್ತೆ ತಾನೇ ಬರೆಯುತ್ತೇನೆ ಎಂಬ ಹುಂಬುತನದ ಕೆಲಸ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.ಇಂದಿರಾ ಗಾಂಧಿ ಕಾಲದಲ್ಲಿ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಇಂದಿರಾ ಗಾಂಧಿ ಇವರ ನಾಯಕಿ ಅಲ್ಲವೇ?. ಸುಖಾಸುಮ್ಮನೆ ಅವರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದರು.
ಇನ್ನು, ಇದೇ ವೇಳೆ ಎಸ್.ಟಿ.ಸೋಮಶೇಖರ್ ಬಿಜೆಪಿ ಸೇರ್ಪಡೆಗೆ ಯಶವಂತಪುರ ಬಿಜೆಪಿ ಘಟಕದ ಪರ-ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಅವರಿಗೆ ಟಿಕೆಟ್ ನೀಡಬೇಕಾ ಅಥವಾ ಬೇಡ್ವಾ ಅನ್ನೋದು ವರಿಷ್ಠರು ತೀರ್ಮಾನಿಸುತ್ತಾರೆ. ವರಿಷ್ಠರು ತೀರ್ಮಾನ ಮಾಡಿದರೆ ನಾವು ಚಾಚೂ ತಪ್ಪದೇ ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.