ಬೆಂಗಳೂರು: ದೇಶದಲ್ಲಿ ಜಿಎಸ್‍ಟಿ ಜಾರಿಗೆ ಬರುವ ಮುನ್ನ ಪತ್ರಿಕಾ ಮುದ್ರಣ ಕಾಗದದ ಮೇಲೆ ಒಟ್ಟಾರೆ ಶೇ.3 ರಷ್ಟು ಮಾತ್ರ ತೆರಿಗೆ ಬೀಳುತ್ತಿತ್ತು. ಆದರೆ ಜಿಎಸ್‍ಟಿ ಬಳಿಕ ಮುದ್ರಣ ಕಾಗದದ ಮೇಲೆ ಶೇ.5 ರಷ್ಟು ತೆರಿಗೆ ಹೇರಲಾಗಿದೆ. ಆರ್‌ಎನ್‍ಐ ನೋಂದಾಯಿತ ಪತ್ರಿಕಾ ಸಂಸ್ಥೆಗಳಿಗೆ ಶೇ.5 ರಷ್ಟು ಜಿಎಸ್‍ಟಿ ನಿಗದಿ ಮಾಡಲಾಗಿದ್ದರೆ, ನೋಂದಾಯಿತವಲ್ಲದ ಸಂಸ್ಥೆಗಳು ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಶೇ.12 ರಷ್ಟು ಜಿಎಸ್‍ಟಿ ನಿಗದಿ ಮಾಡಲಾಗುತ್ತಿದೆ. ಹೀಗಾಗಿ ಪತ್ರಿಕಾ ಸಂಸ್ಥೆಗಳಿಗೆ ಅಗತ್ಯ ಪ್ರಮಾಣದಲ್ಲಿ ಕಾಗದ ದೊರಕುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಇದೆಲ್ಲದರ ಪರಿಣಾಮ ಪತ್ರಿಕೆಗಳ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಿಎಸ್‍ಟಿ ಪ್ರಮಾಣ ಹೆಚ್ಚಳದ ಜತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿಪರೀತ ಏರಿಕೆ, ಮುದ್ರಣ ಕಾಗದಕ್ಕೆ ಬೇಕಾದ ಕಚ್ಛಾ ಪದಾರ್ಥಗಳ ಕೊರತೆ, ಶಿಪ್ಪಿಂಗ್ ಕಂಟೇನರ್ಗಳ ಕೊರತೆ, ಕಾರ್ಮಿಕರ ಕೊರತೆ, ಕೋವಿಡ್ ಸಾಂಕ್ರಾಮಿಕ ಸೃಷ್ಟಿಸಿದ ಪರಿಣಾಮಗಳು ಎಲ್ಲವೂ ಸೇರಿ ಒಂದು ಟನ್ ಮುದ್ರಣ ಕಾಗದವನ್ನು ಆಮದು ಮಾಡಿಕೊಳ್ಳುವ ದರ ಮೊದಲಿದ್ದ ರೂ. 23,000 ದಿಂದ ಈಗ 55,000-60,000 ಕ್ಕೆ ಏರಿಕೆಯಾಗಿದೆ.