ಬೆಂಗಳೂರು:ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್ಲ್ಯಾಂಡ್ ದೇಶದ ಪ್ರಧಾನಿ ಮಾರ್ಕ್ ರುಟ್ಟೆ ಅವರು , ಭಾರತ ಹಾಗೂ ನೆದರ್ಲೆಂಡ್ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸಂದರ್ಭದ ಸವಿ ನೆನಪಿಗಾಗಿ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಇಂದು ಸಂಚರಿಸಿ, ಚಹಾ ಸವಿದರು. ಬ್ರಿಗೇಡ್ ರಸ್ತೆಯಿಂದ ಕಾಲ್ನಡಿಗೆ ಮೂಲಕ ಚರ್ಚ್ ಸ್ಟ್ರೀಟಿನ ಚಾಯ್‌ಪಾಯಿಂಟ್‌ಗೆ ಆಗಮಿಸಿ, ಮಸಾಲಾ ಚಹಾ ಖರೀದಿಸಿ ಸವಿದು, ಯುಪಿಐ ಮೂಲಕ ಹಣ ಪಾವತಿ ಮಾಡಿದರು.
ಬಳಿಕ ತಮ್ಮ ಸಂಗಡಿಗರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಚರ್ಚ್ ಸ್ಟ್ರೀಟಿನ ಬೇರಿ ಸರ್ಕಲ್‌ವರೆಗೆ ಕಾಲ್ನಡಿಗೆಯಲ್ಲಿಯೇ ಬಂದರು. ತಕ್ಷಶಿಲಾ ಇನ್‌ಸ್ಟಿಟ್ಯೂಷನ್ ಗೋಡೆಯ ಮೇಲೆ ಭಾರತ ಹಾಗೂ ನೆದರ್ಲ್ಯಾಂಡ್ ದ್ಯೋತಕವಾಗಿ ಬರೆಯಲಾಗಿರುವ ಸಿಂಹ( Mural)ದ ವರ್ಣಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಭಾರತದ ಡಿಜಿಟಲ್ ಪಾವತಿಯ ಯುಪಿಐ ವಿಧಾನವು ಸರಳ ಹಾಗೂ ಸುಲಭವಾಗಿದೆ. ಇಲ್ಲಿನ ಚರ್ಚ್‌ಸ್ಟ್ರೀಟಿನಲ್ಲಿ ಸಂಚರಿಸಿ ಚಹ ಸವಿದಿರುವುದು ಸಂತಸ ತಂದಿದೆ. ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಿ ಹಂತ ಹಂತವಾಗಿ ದೀರ್ಘಾವಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿ-20 ಯ ನವದೆಹಲಿ ಘೋಷಣೆಗೆ ತಮ್ಮ ಸಂಪೂರ್ಣ ಸಹಮತವಿದೆ ಎಂದ ಅವರು, ಕರ್ನಾಟಕದ ಭೇಟಿ ಸಂದರ್ಭದಲ್ಲಿ ಇಲ್ಲಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ತೋರಿದ ಕಾಳಜಿಯ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದರು.