ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಮೋದಿ ಅವರು ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ದುರಂತ ಅಂದರೆ, ಈ ಹಿಂದೆ ಬೇರೆ ರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಇಂತಹ ಪ್ಯಾಕೇಜ್ ಘೋಷಣೆಯಾಗಿದ್ದು, ಯಾವುದೂ ಜಾರಿ ಆಗಲೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟೀಕಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿ ನಂತರ ಅವರು ಪಕ್ಷದ ನಾಯಕರಾಗಿ ಪ್ರವಾಸ ಮಾಡುತ್ತಿಲ್ಲ. ಅವರು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ಸರ್ಕಾರ ಹಣ ವ್ಯಯ ಮಾಡುತ್ತಿದೆ.
ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಕೋಟಿ ಖರ್ಚು ಮಾಡಿದ್ದಾರೆ. ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ 25 ಕೋಟಿ, ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆಗೆ ಬಂದಾಗ 9 .36 ಕೋಟಿ ವೆಚ್ಚ ಮಾಡಿದ್ದಾರೆ. ಇದೆಲ್ಲವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ರಾಜ್ಯ ಜನರ ತೆರಿಗೆ ಹಣ ಯಾಕೆ ವೆಚ್ಚ ಮಾಡಬೇಕು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವೇ ಇದಕ್ಕೆ ವೆಚ್ಚ ಮಾಡಲಿ. ಮೋದಿ ಅವರು ಬಂದು ಉದ್ಘಾಟನೆ ಮಾಡಿರುವ ಎಲ್ಲ ಕಾಮಗಾರಿಗಳು ಅಪೂರ್ಣ ಕಾಮಗಾರಿಗಳೇ. ಅವರು ಬಂದಾಗ ಪ್ರತ್ಯೇಕ ರಸ್ತೆ, ಹೆಲಿಪ್ಯಾಡ್, ಅತಿಥಿ ಗೃಹ ನಿರ್ಮಿಸುತ್ತಿದ್ದಾರೆ. ಹುಲಿ ಗಣತಿ ಮುಕ್ತಾಯಕ್ಕೆ ಇನ್ನೂ 3 ತಿಂಗಳು ಬೇಕಾಗಿದೆ. ಆದರೂ ಈಗಲೇ ಇವರು ಹುಲಿ ಗಣತಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಂದಿನಿ ಮುಳುಗಿಸುವ ಹುನ್ನಾರ: ಕಳೆದ ಒಂದು ವಾರದಿಂದ ಅಮುಲ್ ಹಾಗೂ ನಂದಿನಿ ವಿಲೀನ ವಿರೋಧಿಸಿ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. 3 ವರ್ಷಗಳಿಂದ ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲು ಪ್ರಯತ್ನ ನಡೆದಿದೆ. ಅಮುಲ್ ಜತೆ ವ್ಯಾಪಾರ ಮಾಡಲು ನಂದಿನಿ ಸಂಸ್ಥೆ ಒಪ್ಪಿಗೆ ನೀಡಿರುವ ಪತ್ರವನ್ನು ಅವರಿಗೆ ಈಗಾಗಲೇ 2021ರಲ್ಲೇ ನೀಡಲಾಗಿದೆ. ಈ ಪತ್ರವನ್ನು ಇವರು ಬಹಿರಂಗಪಡಿಸುತ್ತಿಲ್ಲ. ಇದೆಲ್ಲ ಆದ ನಂತರವಷ್ಟೇ ಅವರು ರಾಜ್ಯದಲ್ಲಿ ಅವರು ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದಾರೆ. ನಂದಿನಿ ಸಂಸ್ಥೆಯನ್ನು ಮುಳುಗಿಸಿ ಅಮುಲ್ ಇದನ್ನು ವಶಪಡಿಸಿಕೊಳ್ಳಲು ಹುನ್ನಾರ ಮಾಡಲಾಗುತ್ತಿದೆ ಎಂದು ಅಪಾದಿಸಿದರು.
ನಮ್ಮ ರಾಜ್ಯದ ಮೂರು ಬ್ಯಾಂಕುಗಳನ್ನು ವಿಲೀನ ಮಾಡುವ ಸಂದರ್ಭದಲ್ಲಿ ಈ ಬ್ಯಾಂಕ್ ಆರಂಭಿಸಿದ ಕುಟುಂಬದ ಸದಸ್ಯರನ್ನಾಗಲಿ, ಆ ಬ್ಯಾಂಕಿನ ಟ್ರಸ್ಟ್ ಸದಸ್ಯರನ್ನಾಗಲಿ ಕೇಳಿದ್ದರಾ? ಸಂಸತ್ತಿನಲ್ಲೂ ಚರ್ಚೆ ಮಾಡದೇ ಸುಗ್ರೀವಾಜ್ಞೆ ಮೂಲಕ ಲಾಭದಾಯಕ ಬ್ಯಾಂಕ್ ಗಳಾದ ಎಸ್ಬಿಎಂ, ಸಿಡಿಕೇಟ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಗಳನ್ನು ವಿಲೀನ ಮಾಡಿದರು. ಈ ಬ್ಯಾಂಕ್ ಗಳು 21 ಲಕ್ಷ ಕೋಟಿ ಮೌಲ್ಯಗಳ ಬ್ಯಾಂಕ್ ಗಳಾಗಿದ್ದವು. ಇದೆಲ್ಲವನ್ನು ಬ್ಯಾಂಕ್ ಆಫ್ ಬರೋಡಾ ಹಾಗೂ ಇತರೆ ಬ್ಯಾಂಕುಗಳಿಗೆ ವಿಲೀನ ಮಾಡಿದರು ಎಂದರು.
ಮುಸ್ಲಿಮರ ಮತ ಒಡೆಯಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ:ನಮ್ಮ ಪ್ರಕಾರ ಹಾಲಿ ಸಚಿವರ ಪೈಕಿ 10 ಸಚಿವರು ತಮ್ಮ ಮಕ್ಕಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಹಾಲಿ ಸಂಸದರು, ಎಂಎಲ್ ಸಿಗಳು ಟಿಕೆಟ್ ಕೇಳುತ್ತಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಗೊಂದಲ ಏರ್ಪಟ್ಟಿದೆ. ದೇವೇಗೌಡರು ದೆಹಲಿಗೆ ಹೋಗಿ ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಂತೆ ಅದೇ ಹೊಂದಾಣಿಕೆ ಈ ಬಾರಿಯೂ ಮಾಡಿಕೊಳ್ಳುತ್ತಿದ್ದಾರೆ. ಮುಸಲ್ಮಾನ ಸಮುದಾಯದ ಮತ ಛಿದ್ರಗೊಳಿಸಲು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷರಾದ ರಮೇಶ್ ಬಾಬು ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಅಭ್ಯರ್ಥಿ ಪಟ್ಟಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿದೆ. 2018ರ ಚುನಾವಣೆ ಸಮಯದಲ್ಲಿ ಬಿಜೆಪಿ ಏಪ್ರಿಲ್ 8ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರು. 1952ರ ಚುನಾವಣೆಯಿಂದ 2018ರ ವರೆಗೆ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆಲುವು ಜನಸಂಘಕ್ಕಾಗಲಿ, ಬಿಜೆಪಿಗಾಗಲಿ ಸಾಧ್ಯವಾಗಿಲ್ಲ. 2004ರಲ್ಲಿ ಅನಂತ ಕುಮಾರ್ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಬಿಜೆಪಿಗೆ 79 ಸ್ಥಾನ ದೊರೆತಿತ್ತು. ಆಗ ಬಿಜೆಪಿ 28% ಮತ ಗಳಿಸಿತ್ತು. ಆಗ ಕಾಂಗ್ರೆಸ್ 38% ಮತಗಳಿಸಿತ್ತು. ಡಬಲ್ ಇಂಜಿನ್ ಸರ್ಕಾರ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದು, ಎರಡು ದಿನಗಳ ಘಟನೆ ನೋಡಿದರೆ, ಅವರಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬಿಜೆಪಿಯವರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಬೊಮ್ಮಾಯಿ ಅವರು ದೆಹಲಿಯಲ್ಲಿ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ಮೂಲಕ ಡಬಲ್ ಇಂಜಿನ್ ಸರ್ಕಾರಕ್ಕೆ ಅಭ್ಯರ್ಥಿ ಮಾಹಿತಿ ಕಲೆಹಾಕಲು ಸಾಧ್ಯವಾಗಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆ. ಮೋದಿ ಹಾಗೂ ಅಮಿತ್ ಶಾ, ನಡ್ಡಾ ಅವರು ನಿರಂತರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಇದೆಲ್ಲವೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ. 40% ಕಮಿಷನ್, ಪೇಸಿಎಂ, ಪಿಎಸ್‌ಐ, ಇತರೆ ನೇಮಕಾತಿ, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಅಕ್ರಮ ಟೆಂಡರ್ ಸೇರಿದಂತೆ ಅನೇಕ ಕಾರಣಗಳಿಂದ ಬಿಜೆಪಿ ತಲ್ಲಣಗೊಂಡು ಸೋಲೊಪ್ಪಿಕೊಂಡಿದೆ ಎಂದರು. ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಹಾಜರಿದ್ದರು.
ಇದನ್ನೂಓದಿ:ನಾಳೆಯಿಂದ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ ಹೆಚ್.ಡಿ.ದೇವೇಗೌಡರು