ಸಲಗ ಸಿನಿಮಾದ ಬಹು ದೊಡ್ಡ ಯಶಸ್ಸಿನ ಬಳಿಕ ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಟಾರ್ಡಮ್ ಹೆಚ್ಚಿಸಿಕೊಂಡಿದ್ದಾರೆ. ಈ ಮಧ್ಯೆ ವಿಜಯ್ ಭೀಮ ಎಂಬ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ. ಒಂದು ಕಡೆ ಭೀಮ ಸಿನಿಮಾ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ನಲ್ಲಿ ಬ್ಯುಸಿಯಾಗಿದ್ದಾರೆ.
ಇದರ ಬೆನ್ನಲ್ಲೆ ದುನಿಯಾ ವಿಜಯ್ ಕೆಲವು ದಿನಗಳ ಹಿಂದೆ ತಮ್ಮ ಹುಟ್ಟೂರಾದ ಕುಂಬಾರನಹಳ್ಳಿಗೆ ಭೇಟಿ ನೀಡಿದ್ದರು. ಹುಟ್ಟೂರಿನಲ್ಲಿ ಹುರುಪಿನಿಂದ ಓಡಾಡಿದ ನಟ ಬಾಲ್ಯದ ನೆನಪುಗಳಿಗೆ ಜಾರಿದರು. ಬಾಲ್ಯದ ದಿನಗಳನ್ನ ಮೆಲುಕು ಹಾಕುತ್ತಾ ಸ್ನೇಹಿತರು ಸಂಬಂಧಿಕರ ಜೊತೆ ಮಾತುಕತೆ ನಡೆಸಿದರು. ದುನಿಯಾ ವಿಜಯ್ ಈ ಬಾರಿಯೂ ಸಹ ತಮ್ಮ ಹುಟ್ಟೂರಿನಲ್ಲಿಯೇ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಈ ಮಧ್ಯೆ ಕುಂಬಾರಹಳ್ಳಿಯಲ್ಲಿ ಯಾವುದೋ ತಪ್ಪಿಗೆ ಜೈಲು ಸೇರಿರುವ ಕೆಲ ಕುಟುಂಬಗಳಿವೆ. ಆ ಕುಟುಂಬದವರು ವಿಜಯ್ ಹತ್ತಿರ ನಮ್ಮ ಮನೆಯವರನ್ನ ಜೈಲಿನಿಂದ ಬಿಡಿಸಿ ಅಂತಾ ಕೇಳಿಕೊಂಡಿದ್ದರು. ಅದರಂತೆ ಇಂದು ದುನಿಯಾ ವಿಜಯ್ ತಮ್ಮ ಹುಟ್ಟೂರಿನ 6ಜನ ಖೈದಿಗಳನ್ನ ಬಿಡಿಸಿದ್ದಾರೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಜನ ಖೈದಿಗಳನ್ನು ನಟ ವಿಜಯ ಅವರೇ ದಂಡ ಕಟ್ಟಿ ಬಿಡುಗಡೆ ಮಾಡಿಸಿದ್ದಾರೆ. ಇಂತಹ ನೋವು ಯಾರಿಗೂ ಬಾರದಿರಲಿ ಎಂದು ವಿಜಯ್ ಅವರಿಗೆ ಹರಸಿದ್ದಾರೆ.