ಬೆಂಗಳೂರು: ಕೋವಿಡ್ 2ನೇ ಅಲೆ ಮೊದಲಿಗಿಂತಲೂ ವ್ಯಾಪಕವಾಗಿ ರಾಜ್ಯಾದ್ಯಂತ ಹಬ್ಬುತ್ತಿದೆ. ಇದರಿಂದ ಬಹುತೇಕ ಆಡಳಿತ ಯಂತ್ರ ಎರಡನೇ ಅಲೆಗೆ ನಿಯಂತ್ರಣ ಹೇರುವ ಕಾರ್ಯದಲ್ಲಿ ಮಗ್ನವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳಲ್ಲಿ ಕೇವಲ ಶೇ 50ರಷ್ಟು ಸಿಬ್ಬಂದಿಗೆ ಮಿತಿ ಹಾಕಲಾಗಿದೆ. ಇದರಿಂದ ಈಗಾಗಲೇ ಕುಂಟುತ್ತಾ ಸಾಗುತ್ತಿದ್ದ ಕಡತ ವಿಲೇವಾರಿಗೆ ಅಕ್ಷರಶಃ ಗ್ರಹಣ ಹಿಡಿಯಲಿದೆ.
ಈಗಾಗಲೇ ಕೋವಿಡ್ 2ನೇ ಅಲೆ ಹಿನ್ನೆಲೆ ಸರ್ಕಾರ ಸರ್ಕಾರಿ ಕಚೇರಿಗಳಲ್ಲೂ ನಿರ್ಬಂಧಗಳನ್ನು ಹೇರಿದೆ. ಸರ್ಕಾರಿ ಕಚೇರಿಗಳಲ್ಲೂ 50:50 ಫಾರ್ಮುಲಾವನ್ನು ಅಳವಡಿಸಿದೆ. ಇನ್ನು ಎಲ್ಲಾ ಇಲಾಖೆಗಳ ಶೇ 50ರಷ್ಟು ಸಿಬ್ಬಂದಿಯನ್ನು ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ರಾಜ್ಯದ ಬಹುತೇಕ ಆಡಳಿತ ಯಂತ್ರ ಕೊರೊನೊ ನಿಯಂತ್ರಣದತ್ತ ಮಗ್ನವಾಗಿದೆ. ಇತ್ತ ಸರ್ಕಾರಿ ದೈನಂದಿನ ಕಾರ್ಯ ನಿರ್ವಹಿಸಲು ಕೇವಲ ಶೇ 50ರಷ್ಟು ಸಿಬ್ಬಂದಿ, ಅಧಿಕಾರಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಈ ಕೋವಿಡ್ ನಿಯಂತ್ರಣ ಕ್ರಮಗಳಿಂದ ಕಡತ ವಿಲೇವಾರಿಗೆ ದೊಡ್ಡ ಪ್ರಮಾಣದಲ್ಲಿ ಹಿನ್ನಡೆಯಾಗಲಿದೆ ಎಂಬ ಆತಂಕ ಎದುರಾಗಿದೆ. ಸಿಬ್ಬಂದಿ ಕೊರತೆ ಹಿನ್ನೆಲೆ ಇಲಾಖೆಗಳ ಕಡತಗಳ ವಿಲೇವಾರಿ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಗಳ ವಿಲೇವಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿರಲಿಲ್ಲ. ಹೀಗಾಗಿ ಕೆಲಸವನ್ನು ಚುರುಕುಗೊಳಿಸಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರೂ, ಆಡಳಿತ ಯಂತ್ರದಲ್ಲಿ ಮಾತ್ರ ಕಡತಗಳ ವಿಲೇವಾರಿ ತೆವಳುತ್ತಾ ಸಾಗಿದೆ.
ಮಾರ್ಚ್ ಅಂತ್ಯದ ವೇಳೆಗೆ ಎಲ್ಲ ಇಲಾಖೆಗಳಲ್ಲಿ ಅಂದಾಜು ಸುಮಾರು 90,129 ಕಡತಗಳು ಬಾಕಿ ಉಳಿದುಕೊಂಡಿದೆ. ಈಗ ಮತ್ತೆ ಕೋವಿಡ್ ಮಾರ್ಗಸೂಚಿಯನ್ವಯ ನಿರ್ಬಂಧಗಳನ್ನು ಹೇರಿರುವುದರಿಂದ ಕೆಲಸ ಮತ್ತಷ್ಟು ಹಳ್ಳಹಿಡಿಯಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜನಸ್ಪಂದನದಡಿ ಸ್ವೀಕೃತ ಅರ್ಜಿಗಳ ವಿಲೇವಾರಿ ವಿಳಂಬ: ಇತ್ತ ಜನಸ್ಪಂದನಾದಡಿ ಸ್ವೀಕರಿಸಲಾಗುವ ಅರ್ಜಿಗಳ ವಿಲೇವಾರಿಗೆ ಕಳೆದ ನಾಲ್ಕೈದು ತಿಂಗಳಿಂದ ಗ್ರಹಣ ಹಿಡಿದಿದೆ. ಬಹುತೇಕ ದಾಖಲೆಗಳು ವಿಲೇವಾರಿಯಾಗದೇ ಹಾಗೆಯೇ ರಾಶಿ ಬಿದ್ದಿವೆ.
ಜನಸ್ಪಂದನದಡಿ ಸ್ವೀಕೃತಿಯಾದ ಇಲಾಖಾವಾರು ಅರ್ಜಿಗಳ ವಿಲೇವಾರಿ ತೀರಾ ಕಳಪೆಯಾಗಿದೆ. ಒಟ್ಟು 37,339 ಅರ್ಜಿಗಳು ವಿಲೇವಾರಿಯಗದೇ ಹಾಗೆಯೇ ಬಾಕಿ ಉಳಿದುಕೊಂಡಿದೆ. ಈ ಪೈಕಿ 34,316 ಅರ್ಜಿಗಳನ್ನು 30 ದಿನ ಕಳೆದರೂ ವಿಲೇವಾರಿ ಮಾಡಿಲ್ಲ.