ಬೆಂಗಳೂರು: ನಗರದಲ್ಲಿ ನಾಳೆ ಕೋವಿಡ್ 19 ವ್ಯಾಕ್ಸಿನ್ ತಾಲೀಮು ನಡೆಯಲಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಬಗ್ಗೆ ಅಣಕು ಕಾರ್ಯಕ್ರಮ ನಡೆಯಲಿದೆ.
ಕೋವಿಡ್ ವ್ಯಾಕ್ಸಿನ್ ಡ್ರೈರನ್ ಗೆ ಸಿದ್ಧತೆ: ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಯಾರಿ ಡ್ರೈರನ್ ಪ್ರಕ್ರಿಯೆ 2 ಗಂಟೆಗಳ ಕಾಲ ನಡೆಯಲಿದೆ. ಪಾಲಿಕೆ ವ್ಯಾಪ್ತಿಯ 2 ಕಡೆ, ದಕ್ಷಿಣ ವಲಯದ ವಿದ್ಯಾಪೀಠದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ, ಪಶ್ಚಿಮ ವಲಯದ ಕಾಮಾಕ್ಷಿಪಾಳ್ಯದ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಬೆಂಗಳೂರು ನಗರ ಗ್ರಾಮಾಂತರ ಅನೇಕಲ್ ಭಾಗದ ಹರ್ಗಾದೆಯಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ತಾಲೀಮು ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಡ್ರೈರನ್ ಕೇಂದ್ರದ ವಿಭಾಗದಡಿಯಲ್ಲಿ ಮತ್ತೆ 4 ವಿಭಾಗಗಳಿವೆ:
1. ರಿಜಿಸ್ಟ್ರೇಶನ್ ವಿಭಾಗ
2. ವೈಟಿಂಗ್ ರೂಂ
3. ವ್ಯಾಕ್ಸಿನ್ ರೂಂ
4.ಅಬ್ಸರ್ವೇಶನ್ ರೂಂ
1. ರಿಜಿಸ್ಟ್ರೇಶನ್ ವಿಭಾಗ:ವ್ಯಾಕ್ಸಿನ್ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. ರಿಜಿಸ್ಟ್ರೇಶನ್ ಗೆ ಅಡ್ರೆಸ್ ಪ್ರೂಫ್ ಇರುವ ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಯಾವುದಾದರೂ ಒಂದು ದಾಖಲಾತಿ ಇರಲೇಬೇಕು. ಸರ್ಕಾರಿ ಅಧಿಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಉದ್ಯೋಗಿ ಆಗಿದ್ರೆ ಐಡಿ ಕಾರ್ಡ್ ಇರಬೇಕು.
2. ವೈಟಿಂಗ್ ರೂಂ: ರಿಜಿಸ್ಟ್ರೇಶನ್ ಆದ ನಂತರ ವ್ಯಕ್ತಿಗೆ ನಂಬರ್ ಕೊಡುತ್ತಾರೆ. ನಂಬರ್ ಪ್ರಕಾರ ವೈಟಿಂಗ್ ರೂಮ್ ನಲ್ಲಿ ಕುಳಿತುಕೊಂಡು ತಮ್ಮ ಹೆಸರು ಬಂದಾಗ ವ್ಯಾಕ್ಸಿನ್ ರೂಂ ಗೆ ಹೋಗಬೇಕು.
3. ವ್ಯಾಕ್ಸಿನ್ ರೂಂ:ವ್ಯಾಕ್ಸಿನ್ ರೂಮ್ ನಿಂದ ಕರೆ ಬಂದ ನಂತರ ಅಲ್ಲಿಗೆ ಹೋಗಬೇಕು. ವ್ಯಾಕ್ಸಿನ್ ರೂಂ ನಲ್ಲಿ ಡಾಕ್ಟರ್ ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ಮಾಡಿ ವ್ಯಾಕ್ಸಿನ್ ಕೊಡುವ ರೀತಿ ಅಣಕು ಕಾರ್ಯ ಮಾಡುತ್ತಾರೆ. ವ್ಯಾಕ್ಸಿನ್ ಕೊಟ್ಟ ನಂತರ ಅಬ್ಸರ್ವೇಶನ್ ರೂಂ ಗೆ ಹೋಗಬೇಕು.
4. ಅಬ್ಸರ್ವೇಶನ್ ರೂಂ:ವಾಕ್ಸಿನ್ ಪಡೆದ ನಂತರ ವ್ಯಕ್ತಿಯನ್ನು ಅಬ್ಸರ್ವೇಶನ್ ರೂಂ ಗೆ ಸ್ಥಳಾಂತರ ಮಾಡುತ್ತಾರೆ. ಆ ನಂತರ 30 ನಿಮಿಷಗಳ ಕಾಲ ವೈದ್ಯರ ನಿಗಾದಲ್ಲೇ ಇರಬೇಕು. ಈ ಸಮಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಟ್ಟು ನಂತರ ಆಸ್ಪತ್ರೆಗೆ ರವಾನಿಸುತ್ತಾರೆ. ಯಾವುದೇ ಸಮಸ್ಯೆ ಕಂಡುಬರದಿದ್ದರೆ ಮನೆಗೆ ತೆರಳಬಹುದು.