ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಸಣ್ಣ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಗೋವಿಂದರಾಜನಗರದ ನಿವಾಸಿ ನರೇಶ್ ಹತ್ಯೆಯಾಗಿರುವ ಸ್ನೇಹಿತ. ಮಾರಿಮುತ್ತು ಎಂಬ ಆರೋಪಿ ಕಲ್ಲಿನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ವಿವಾಹಿತರಾಗಿದ್ದ ನರೇಶ್, ತಾಯಿ-ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಗಂಡ-ಹೆಂಡತಿ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು. ಇಂದು ಕೆಲಸ ಇಲ್ಲದಿದ್ದರಿಂದ ನಾಗರಭಾವಿ ಮುಖ್ಯರಸ್ತೆಯಲ್ಲಿರುವ ಬಾರ್ವೊಂದಕ್ಕೆ ಕುಡಿಯಲು ಬಂದಿದ್ದನು. ಈತನೊಂದಿಗೆ ಆರೋಪಿತ ಮಾರಿಮುತ್ತು ಹಾಗೂ ಇನ್ನಿತ ಸ್ನೇಹಿತರು ಒಟ್ಟಿಗೆ ಮದ್ಯಪಾನ ಮಾಡಿ ಹೊರಬಂದಿದ್ದರು.
ಕ್ಷುಲ್ಲಕ ಕಾರಣಕ್ಕಾಗಿ ನರೇಶ್ ಹಾಗೂ ಸ್ನೇಹಿತರ ನಡುವೆ ಮಾತಿನ ಚಕಮಕಿಗೆ ಉಂಟಾಗಿದೆ. ನೋಡ-ನೋಡುತ್ತಿದ್ದಂತೆ ಗಲಾಟೆ ಶುರುವಾಗಿದೆ. ಮಾರಿಮುತ್ತು ಫುಟ್ಪಾತ್ ಮೇಲಿದ್ದ ಕಲ್ಲನ್ನು ನರೇಶ್ ತಲೆ ಮೇಲೆ ಎತ್ತಿ ಹಾಕಿದ್ದಾನೆ. ಪೆಟ್ಟು ಹೆಚ್ಚಾಗಿದ್ದರಿಂದ ರಕ್ತಸ್ರಾವ ಉಂಟಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕೃತ್ಯವೆಸಗಿದ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರ ಪತ್ನಿ ಮಹಾದೇವಿ ಎಂಬುವರು ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.