ಬೆಂಗಳೂರು :ಕುಡಿದ ಅಮಲಿನಲ್ಲಿ ಬೇಕರಿ ಅಂಗಡಿಯವನೊಂದಿಗೆ ಜಗಳವಾಡಿದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮುಂದೆಯೇ ವ್ಯಕ್ತಿಯೋರ್ವ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಸದ್ಯ ಆರೋಪಿಯನ್ನು ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹುಳಿಮಾವು ನಿವಾಸಿ ನಾಗೇಶ್ ಎಂಬಾತ ಬಂಧಿತ ಆರೋಪಿ. ಎಎಸ್ಐ ಶಿವಕುಮಾರ್ ಹಾಗೂ ಕಾನ್ಸ್ಟೇಬಲ್ ಚಂದ್ರೇಗೌಡ ಹಲ್ಲೆಗೊಳಗಾದವರು.
ಪತಿಯನ್ನು ಬಂಧಿಸದಂತೆ ಹೆಂಡತಿಯಿಂದ ಹೈಡ್ರಾಮಾ.. ಫೆ.26 ರಂದು ರಾತ್ರಿ 10 ಗಂಟೆ ಸುಮಾರಿಗೆ ಹುಳಿಮಾವಿನ ಬಸವನಪುರ ವೃತ್ತ ಬಳಿಯ ಬೇಕರಿಯೊಂದರಲ್ಲಿ ಸಿಗರೇಟು ಖರೀದಿ ವಿಚಾರವಾಗಿ ಗಲಾಟೆ ನಡೆದಿತ್ತು. ಕೂಡಲೇ ಬೇಕರಿ ಮಾಲೀಕ ಹರೀಶ್ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಗಸ್ತು ತಿರುಗುತ್ತಿದ್ದ ಎಎಸ್ಐ ಶಿವಕುಮಾರ್ ಹಾಗೂ ಕಾನ್ಸ್ಟೇಬಲ್ ಚಂದ್ರೇಗೌಡ ಸ್ಥಳಕ್ಕೆ ಬಂದಿದ್ದಾರೆ.
ಎಚ್ಚರಿಕೆ ನೀಡಿ ಮನೆಗೆ ಹೋಗುವಂತೆ ಹೇಳಿದರೂ ಕ್ಯಾರೆ ಅನ್ನದ ನಾಗೇಶ್ ಪೊಲೀಸರ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ತಡೆಯಲು ಬಂದ ಎಎಸ್‌ಐಗೆ ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಫೋನ್ ಮಾಡಿದರೆ ಕೆಲ ಸಂಘಟನೆಯವರು ಬರುತ್ತಾರೆ. ಏನ್ ಆಗುತ್ತೋ ನೋಡಿಯೇ ಬಿಡುತ್ತೇನೆ ಎಂದು ಬೆದರಿಸಿದ್ದಾನೆ.
ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಎಎಸ್‌ಐ ಶಿವಕುಮಾರ್, ಹೊಯ್ಸಳ ವಾಹನ ಹತ್ತುವಂತೆ ಆರೋಪಿಗೆ ಸೂಚಿಸಿದ್ದರು. ಆದರೆ, ಆರೋಪಿ ಠಾಣೆಗೆ ಬರಲು ಒಪ್ಪಲಿಲ್ಲ. ಬಂಧಿಸಲು ಹೋದ ಪೊಲೀಸರನ್ನು ತಳ್ಳಿದ ನಾಗೇಶ್, ತನ್ನ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದನ್ನು ಓದಿ: ಸೊರಗಿದ ನೀರಾವರಿ ಯೋಜನೆಗಳು.. ಹಣ ಹರಿಯಿತು, ನೀರೇ ಹರಿಯಲಿಲ್ಲ!
ಎಎಸ್‌ಐಗೆ ಕಾಲಿನಿಂದ ಒದ್ದು, ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಅಲ್ಲ, ತನ್ನ ಬಳಿಯಿದ್ದ ಬೈಕ್‌ನ ಕೀಯಿಂದ ಅವರ ಎದೆಗೆ ಪರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಇದಾದ ಬಳಿಕ ಹೆಂಡತಿ ಮಕ್ಕಳನ್ನು ಸ್ಥಳಕ್ಕೆ ಆರೋಪಿ ಪೋನ್ ಮಾಡಿ ಕರೆದಿದ್ದಾನೆ. ಅಷ್ಟೇ ಅಲ್ಲ, ಹೊಯ್ಸಳ ವಾಹನದ ಮುಂದೆ ಮಲಗುವಂತೆ ಸೂಚಿಸಿದ್ದಾನೆ.
ಪತಿಯನ್ನು ಕರೆದೊಯ್ದರೆ, ಪೊಲೀಸರ ವಿರುದ್ಧವೇ ದೂರು ನೀಡುವುದಾಗಿ ಪತ್ನಿ ಬೆದರಿಸಿದ್ದಳು. ಬಳಿಕ ಎಎಸ್‌ಐ ಶಿವಕುಮಾರ್ ಸಮಾಧಾನಪಡಿಸಿದರೂ ಆಕೆ ಸುಮ್ಮನಾಗಿಲ್ಲ. ನಂತರ ಇನ್ನಷ್ಟು ಮಂದಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಆರೋಪಿ ನಾಗೇಶ್‌ನನ್ನು ಹೊಯ್ಸಳ ವಾಹನದಲ್ಲಿ ಕೂರಿಸಿಕೊಂಡು ಠಾಣೆಗೆ ಕರೆ ತಂದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.