ಬೆಂಗಳೂರು: ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ನಡೆದ ಜಗಳ, ಅದು ಒಬ್ಬನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.
ಬಹಳ ದಿನದ ಮೇಲೆ ಇಬ್ಬರೂ ಸಿಕ್ಕಿದ್ರು.. ಕುಡಿದು ಜಗಳವಾಡಿದರು.. ಒಬ್ಬನದು ಕೊಲೆ, ಇನ್ನೊಬ್ಬ ಜೈಲಿಗೆ.. - undefined
ಕುಡಿದ ಮತ್ತಿನಲ್ಲಿದ್ದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಇಬ್ಬರು ತಮಿಳುನಾಡಿನ ಮೂಲದವರಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಚಾನಕ್ ಆಗಿ ಇಬ್ಬರು ಪರಸ್ಪರ ಭೇಟಿಯಾಗಿದ್ದರಂತೆ. ಆದರೆ, ಇಬ್ಬರ ಮಧ್ಯೆ ಕುಡಿದ ಮತ್ತಿನಲ್ಲಿ ಅದೇನ್ ಕಿರಿಕ್ ಆಯ್ತೋ ಮಾತಿಗೆ ಮಾತು ಬೆಳೆದು ಕೊನೆಗೆ ಕೊಲೆಯಲ್ಲಿ ಅದು ಅಂತ್ಯ ಕಂಡಿದೆ.
![ಬಹಳ ದಿನದ ಮೇಲೆ ಇಬ್ಬರೂ ಸಿಕ್ಕಿದ್ರು.. ಕುಡಿದು ಜಗಳವಾಡಿದರು.. ಒಬ್ಬನದು ಕೊಲೆ, ಇನ್ನೊಬ್ಬ ಜೈಲಿಗೆ..](https://etvbharatimages.akamaized.net/etvbharat/prod-images/768-512-3719842-thumbnail-3x2-bengajpg.jpg)
ತಮಿಳುನಾಡಿನ ವೇಲೂರಿನ ಜ್ಞಾನಸಾಗರ ಎಂಬಾತ ಕೊಲೆಯಾದ ವ್ಯಕ್ತಿ. ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯ 15ನೇ ಕ್ರಾಸ್ ಐಡಿಯಲ್ ಹೋಮ್ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಜ್ಞಾನಸಾಗರ ಗಾರೆ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದ. ಭಾನುವಾರ ರಾತ್ರಿ ಊರಿಗೆ ತೆರಳುವ ಸಲುವಾಗಿ ಜ್ಞಾನಸಾಗರ ನಡೆದು ಹೋಗುತ್ತಿದ್ದಾಗ, ಈತನ ಜೊತೆ ಕೆಲಸ ಮಾಡುವ ರಂಜಿತ್ ಎದುರಾಗಿದ್ದಾನೆ. ಈತನೂ ಸಹ ವೇಲೂರು ಮೂಲದವನಾಗಿದ್ದು, ಹಲವು ವರ್ಷಗಳಿಂದ ನಗರದ ಬಂಗಾರಪ್ಪ ಗುಡ್ಡದಲ್ಲಿ ವಾಸವಾಗಿದ್ದ. ಇವರಿಬ್ಬರು ರಾತ್ರಿ 11 ಗಂಟೆ ಸುಮಾರಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದಾಗ ಜ್ಞಾನಸಾಗರ ಬೈದಿದ್ದಾನೆ. ಇದರಿಂದ ಕೋಪಗೊಂಡ ರಂಜಿತ್ ಆತನ ಮುಖಕ್ಕೆ ಗುದ್ದಿದಾಗ ಕೆಳಗೆಬಿದ್ದ ಜ್ಞಾನಸಾಗರನನ್ನು ಬಿಡದೆ ತಲೆಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಮಾರ್ಗದಲ್ಲಿ ಹೋಗುತ್ತಿದ್ದವರು ವ್ಯಕ್ತಿ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಈತ ಗಾರೆ ಕೆಲಸಗಾರ ಜ್ಞಾನಸಾಗರ ಎಂಬುದು ತಿಳಿದುಬಂದಿದ್ದು, ಈ ಮಾಹಿತಿ ಆಧರಿಸಿ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ರಂಜಿತ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.