ಬೆಂಗಳೂರು: ಮಾದಕ ವಸ್ತುಗಳು ಯುವ ಜನತೆಯನ್ನು ಗುರಿಯಾಗಿಸುವುದಲ್ಲದೆ, ಇಡೀ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಪ್ರಭಾವ ಬೀರಲಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮಾದಕ ವಸ್ತುಗಳನ್ನು ಅಕ್ರಮವಾಗಿ ವಿದೇಶಕ್ಕೆ ರವಾನೆ ಮಾಡುತ್ತಿದ್ದ ಕೇರಳ ಮೂಲದ ಆರೋಪಿಗೆ ಜಾಮೀನು ನಿರಾಕರಿಸಿದೆ.
ಮಾದಕ ವಸ್ತುಗಳ ಸಾಗಣೆಗೆ ಅಕ್ರಮವಾಗಿ ಹಣ ಹೂಡಿಕೆ ಮಾಡಲಾಗುತ್ತಿದ್ದು, ಇದು ಕಾನೂನು ಬಾಹಿರವಾಗಿ ಹಣ ಮಾಡುವ ದಂದೆಯಾಗಿದೆ. ಈ ಚಟುವಟುಕೆಯನ್ನು ಹಗುರವಾಗಿ ಪರಿಗಣಿಸಲಾಗದು ಎಂದು ನ್ಯಾ.ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ ತಿಳಿಸಿದ್ದು, ಕೇರಳದ ಮಲ್ಲಪುರಂ ನ ಥಾಹಾ ಉಮ್ಮರ್ ಎಂಬುವರಿಗೆ ಜಾಮೀನು ನಿರಾಕರಿಸಿದೆ. ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ನಿರ್ದಿಷ್ಟ ಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾದಕ ವಸ್ತುವಿನ ಪರೀಕ್ಷೆ ಸಂಗ್ರಹ ಮಾಡಿದ ಕಾರಣ ಜಾಮೀನು ಪಡೆಯಲು ಅರ್ಹನಾಗುತ್ತಾನೆ ಎಂಬ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ನ್ಯಾಯಾಲಯದ ಆದೇಶವೇನು?ಅರ್ಜಿದಾರ ಮೆಡಿಕಲ್ ಶಾಪ್ ಮಾಲೀಕ. ಅಲ್ಲಿ ಕೆಲಸ ಮಾಡುವ ಉದ್ಯೋಗಿಯ ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡು, ನಕಲಿ ರೋಗಿಗಳ ಹೆಸರಿನಲ್ಲಿ ವಿಳಾಸ ಮತ್ತು ವೈದ್ಯರ ಚೀಟಿ ಸೃಷ್ಟಿಸಿ ಅಂಚೆ ಮೂಲಕ ವಿದೇಶಗಳಿಗೆ ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ. ಇದು ಗಂಭೀರ ಆರೋಪವಾಗಿದ್ದು, ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಪರೀಕ್ಷೆಗಾಗಿ 5 ಗ್ರಾಂ ಮಾದಕ ವಸ್ತು ಮಾದರಿ ಸಂಗ್ರಹಿಸುವುದು ಕಡ್ಡಾಯ. ಉಮ್ಮರ್ ಭಾಗಿಯಾಗಿರುವ ಈ ಪ್ರಕರಣದಲ್ಲಿ 4.2 ಗ್ರಾಂ ಮಾದರಿ ಸಂಗ್ರಹಿಸಲಾಗಿದೆ. ಆದರೆ, ಈ ಪ್ರಮಾಣದಿಂದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಅಥವಾ ಸಂಗ್ರಹಿಸಿದ ಮಾದರಿ ಕಡಿಮೆ ಪ್ರಮಾಣದಲ್ಲಿದೆ ಎಂದು ರಾಸಾಯನಿಕ ಪರೀಕ್ಷಕರು ತಿಳಿಸಿಲ್ಲ. ಪರೀಕ್ಷೆ ನಡೆಸಲು ನಿರಾಕರಿಸಿಯೂ ಇಲ್ಲ. ಹಾಗಾಗಿ, ಈ ವಾದವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.