ಬೆಂಗಳೂರು: ಡಾರ್ಕ್ ವೆಬ್ ಮೂಲಕ ವಿದೇಶಗಳಿಂದ ಡ್ರಗ್ಸ್ ತರಿಸಿ ದೇಶದೆಲ್ಲೆಡೆ ಪೋಸ್ಟ್ ಮೂಲಕ ಸರಬರಾಜು ಮಾಡಿ, ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಪುಣೆ ಮೂಲದ ತಾವರೆಕೆರೆಯ ನಿವಾಸಿ ರಾಹುಲ್ ತುಳಸಿರಾಮ್ ಶರ್ಮಾ ಹಾಗೂ ತಮಿಳುನಾಡಿನ ಸೇಲಂ ನಿವಾಸಿ ಬಾಲಾಜಿ ಬಂಧಿತರು. ಅವರಿಂದ ಸುಮಾರು 1.39 ಕೋಟಿ ರೂ. ಮೌಲ್ಯದ 9,310 ಎಲ್ಎಸ್ಡಿ ಸ್ಟ್ರೀಪ್ಸ್ಗಳು ಹಾಗೂ 27,50 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
ಕೆಲ ವರ್ಷಗಳ ಹಿಂದೆ ಪುಣೆಯಿಂದ ಬೆಂಗಳೂರಿಗೆ ವ್ಯಾಸಂಗಕ್ಕಾಗಿ ಬಂದಿದ್ದ ರಾಹುಲ್ ಕಾಲೇಜಿಗೆ ಸರಿಯಾಗಿ ಹೋಗದೆ ಡ್ರಗ್ಸ್ ವ್ಯಸನಿಯಾಗಿದ್ದ. ಡಾರ್ಕ್ ವೆಬ್ ಮೂಲಕ ಆನ್ಲೈನ್ನಲ್ಲಿ ದಂಧೆಕೋರರ ಸಂಪರ್ಕ ಮಾಡಿ, ಶಾಲಾ- ಕಾಲೇಜುಗಳ ಮುಂದೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಇದೇ ರೀತಿ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಇದೇ ಪ್ರಕರಣದಲ್ಲಿ ಭಾಗಿಯಾಗಿ ಕೋಣನಕುಂಟೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ವಿಷಯ ತಿಳಿದು ಬಂದಿದೆ. ಬಳಿಕ ಜಾಮೀನು ಪಡೆದು ದಂಧೆಯಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾನೆ. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸೇಲಂ ಮೂಲದ ಬಾಲಾಜಿ ಎಂಬಾತ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬ ವಿಚಾರ ಬಯಲಿಗೆ ಬಂದಿದೆ.
ಓದಿ:ಬೆಂಗಳೂರು ಗಲಭೆ ಪ್ರಕರಣ: ಸಿಸಿಬಿಯಿಂದ ಮತ್ತೊಬ್ಬ ಆರೋಪಿಯ ಬಂಧನ
ಆರೋಪಿ ನೀಡಿದ ಸುಳಿವಿನ ಆಧಾರದ ಮೇಲೆ ಸೇಲಂಗೆ ತೆರಳಿ ಆತ ವಾಸವಾಗಿದ್ದ ಮನೆ ಮೇಲೆ ದಾಳಿ ನಡೆಸಿ 1.39 ಕೋಟಿ ರೂ. ಮೌಲ್ಯದ 9,310 ಎಲ್.ಎಸ್.ಡಿ ಸ್ಟ್ರೀಪ್ಸ್ ವಶಪಡಿಸಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಬಾಲಾಜಿ ವಿದೇಶಗಳಿಂದ ಡ್ರಗ್ಸ್ ತರಿಸಿಕೊಂಡು ಡಾರ್ಕ್ ವೆಬ್ ಮೂಲಕ ಗ್ರಾಹಕರ ವಿಳಾಸಕ್ಕೆ ಪೋಸ್ಟ್ ಮೂಲಕ ಸರಬರಾಜು ಮಾಡುತ್ತಿದ್ದ ಎಂಬ ವಿಷಯ ತಿಳಿದು ಬಂದಿದೆ. ಆನ್ಲೈನ್ನಲ್ಲೇ ಆತ ಹಣದ ವ್ಯವಹಾರ ನಡೆಸುತ್ತಿದ್ದ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.