ಬೆಂಗಳೂರು: "ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಜನರಿಂದ ಅಭಿನಂದನೆ ವ್ಯಕ್ತವಾಗುತ್ತಿದೆ. ಇದನ್ನು ನಿರಂತರವಾಗಿ ಅಳವಡಿಸಿಕೊಳ್ಳಬೇಕು" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಮಂಗಳವಾರ ಬೆಳಗ್ಗೆ ಸದಾಶಿವನಗರದ ಗೃಹ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣಗುಪ್ತ, ಸತೀಶ್, ಎಂ.ಎನ್. ಅನುಚೇತ್ ಸೇರಿದಂತೆ ನಗರದ ಎಲ್ಲ ವಿಭಾಗದ ಡಿಸಿಪಿಗಳ ಜತೆ ಸಭೆ ನಡೆಸಿದರು. ಈ ವೇಳೆ, ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
"ನಾನು ಕಾಲೇಜು ದಿನಗಳಿಂದಲೂ ಹೊಸ ವರ್ಷ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ವರ್ಷ ವಿಶೇಷವಾಗಿ ಆಚರಣೆ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ಇದರಲ್ಲಿ ಪೊಲೀಸರ ಶ್ರಮ ದೊಡ್ಡದು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಕ್ತದಾನ, ನೇತ್ರದಾನಕ್ಕೆ ಸಹಿ, ಶಾಲಾ ಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ಸಿಹಿ ಹಂಚಿರುವುದು, ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗೆ ಶುಭ ಕೋರುವ ಮೂಲಕ ಹೊಸ ವರ್ಷ ಆಚರಣೆ ಮಾಡಿರುವುದು ಅರ್ಥಪೂರ್ಣ ಎನಿಸಿದೆ. ಜನರು ಸಹ ಇದನ್ನೇ ಬಯಸುವುದು. ಪೊಲೀಸರು ನಮ್ಮ ಜೊತೆಗೆ ಇದ್ದಾರೆ, ರಕ್ಷಣೆ ಮಾಡುತ್ತಾರೆ ಎಂಬ ಇಲಾಖೆಯ ಮೇಲಿನ ನಂಬಿಕೆ, ಗೌರವ ಹೆಚ್ಚಾಗಬೇಕು. ಇದು ಹೀಗೆ ಮುಂದುವರಿಯಲಿ" ಎಂದು ತಿಳಿಸಿದರು.
"ಕರ್ನಾಟಕವನ್ನು "ಮಾದಕದ್ರವ್ಯ ಮುಕ್ತ" ರಾಜ್ಯವನ್ನಾಗಿಸಬೇಕು ಎಂಬುದು ನನ್ನ ಪ್ರಮುಖ ಗುರಿ. ನಿನ್ನೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರು ಸಹ ಇದೇ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸಿನ್ಸಿಯರ್ ಆಗಿ, ಹೆಚ್ಚಿನ ಶ್ರಮ ಹಾಕಬೇಕಿದೆ. ಕೆಲ ದೇಶಗಳ ಪ್ರಜೆಗಳು ಹೆಚ್ಚಾಗಿ ಮಾದಕದ್ರವ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ನಗರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಹಾಗೂ ನಗರಕ್ಕೆ ಬರುವ ವಿದೇಶಿ ಪ್ರಜೆಗಳ ಮೇಲೆ ಕಣ್ಣಿಡಬೇಕು. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ 'ಕ್ರಿಯಾ ಯೋಜನೆ' (plan of action) ರೂಪಿಸಬೇಕಿದೆ." ಈ ಬಗ್ಗೆ ಸಜ್ಜಾಗುವಂತೆ ಸೂಚಿಸಿದರು.