ಬೆಂಗಳೂರು:ಒಂದು ಕಡೆ ನಗರ ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರುತ್ತಿದ್ದರೆ, ಮತ್ತೊಂದೆಡೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಡ್ರಗ್ಸ್ ಪಾರ್ಟಿಗಳು ಮುಂದುವರೆದಿವೆ. ಈ ಸಂಬಂಧ ನಾಲ್ವರನ್ನು ಜೆ.ಪಿ.ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೊಹಮದ್ ಮುಜಾಮಿಲ್, ಸೈಯದ್ ಶೋಯಾಬುದ್ದೀನ್, ರವಿಕುಮಾರ್ ಹಾಗೂ ವಿದೇಶಿ ಪ್ರಜೆ ವಿದೇಶಿ ಪ್ರಜೆ ಡೋಸೊ ಖಲೀಫಾ ಎಂಬುವರನ್ನು ಬಂಧಿಸಲಾಗಿದೆ. ಇವರು ಹೋಟೆಲ್ನಲ್ಲಿ ರೂಂ ಬುಕ್ ಮಾಡಿ ಮಾದಕ ವಸ್ತು ಸೇವಿಸಿ ನಶೆಯಲ್ಲಿ ತೇಲುತ್ತಿದ್ದರು. ಜೊತೆಗೆ ಯುವ ಜನರನ್ನು ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿರುವ ಔರಿಕ್ ಬೌಂಟಿಕ್ ಎಂಬ ಪ್ರತಿಷ್ಠಿತ ಹೋಟೆಲ್ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ರವಿ ಎಂಬಾತ ಬಿಡಿಎ ಬ್ರೋಕರ್. ಮೊಹಮದ್ ಮುಜಾಮಿಲ್ ಎಂಬಾತ ಕಳೆದ ನಾಲ್ಕು ವರ್ಷದಿಂದ ಶ್ರೀಲಂಕಾದ ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಡ್ರಗ್ಸ್ ಜಾಲದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಕೋವಿಡ್ ಬಳಿಕ ನೇರವಾಗಿ ಬೆಂಗಳೂರಿಗೆ ಬಂದಿದ್ದ ಈತನಿಗೆ ಪರಿಚಯವಾದನೇ ಬಿಡಿಎ ರವಿ. ಬ್ರೋಕರ್ ಆಗಿರುವ ರವಿ ಆಗಾಗ್ಗೆ ಕೊಲೊಂಬೋಗೆ ಹೋಗಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಎನ್ನಲಾಗ್ತಿದೆ.