ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಮಾದಕ ವಸ್ತುವಿನ ಮೂಲ ಹುಡುಕಿ ಹೊರಟ ಸಿಸಿಬಿ ಮಾದಕ ನಿಗ್ರಹ ದಳ ಆಂಧ್ರಪ್ರದೇಶ ಮೂಲದ ನಾಲ್ವರು ಮಹಿಳೆಯನ್ನು ಬಂಧಿಸಿದೆ. ಪುಷ್ಪಾ, ವಿಜಯಾ, ಪೊರನಮ್ಮ ಹಾಗೂ ದೇವಿ ಬಂಧಿತರು.
ಇತ್ತೀಚೆಗೆ ವಿವೇಕ ನಗರ ಠಾಣಾ ಪೊಲೀಸರು ಮಾದಕ ವಸ್ತು ಸರಬರಾಜಿನಲ್ಲಿ ಸಕ್ರಿಯನಾಗಿದ್ದ ಡಿಜೆಯೊಬ್ಬನನ್ನು ಬಂಧಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆರೋಪಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದವರ ಮೂಲ ಹುಡುಕಿ ಹೊರಟ ಸಿಸಿಬಿ ಪೊಲೀಸರು ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ಪುಟ್ಟಪರ್ತಿ ಬಳಿ ಬೆಂಗಳೂರು ಮೂಲದ ಪೆಡ್ಲರ್ಸ್ಗೆ ಗಾಂಜಾ ಪೂರೈಸುವ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಿದ್ದಾರೆ.
ಮಾದಕ ವಸ್ತು ಸರಬರಾಜು: ನಾಲ್ವರು ಮಹಿಳೆಯರು ಸಿಸಿಬಿ ಬಲೆಗೆ ಆಂಧ್ರ ಪ್ರದೇಶದ ಸಿಂತಪಲ್ಲಿಯ ಅರಣ್ಯ ಪ್ರದೇಶಗಳಿಂದ ವಿವಿಧ ಮಾದಕ ಪದಾರ್ಥಗಳಗಳನ್ನು ಪಡೆಯುತ್ತಿದ್ದ ಆರೋಪಿ ಮಹಿಳೆಯರು, ರೈಲ್ವೆ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ, ಸರಂಜಾಮುಗಳ ನಡುವೆ ಅಡಗಿಸಿಡುತ್ತಿದ್ದರು. ಬಳಿಕ ರೈಲಿನಲ್ಲಿ ಅವುಗಳನ್ನು ಸಾಗಿಸಿ ಬೆಂಗಳೂರು ಮೂಲದ ವ್ಯಕ್ತಿಗಳಿಗೆ ನೀಡಿ ವಾಪಸ್ ತೆರಳುತ್ತಿದ್ದರು.
ಬೆಂಗಳೂರಿನಲ್ಲಿ ಬಂಧಿತನಾಗಿದ್ದ ವಿದೇಶಿ ಮೂಲದ ಡಿಜೆಯನ್ನು ವಿಚಾರಣೆ ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಬರೋಬ್ಬರಿ 7 ಕೋಟಿ 80 ಲಕ್ಷ ಮೌಲ್ಯದ 1 ಕೆ.ಜಿ 4 ಗ್ರಾಂ ಮಾದಕ ಮಾತ್ರೆ, 8 ಕೆಜಿ ಹ್ಯಾಶಿಸ್ ಆಯಿಲ್, 10 ಕೆಜಿ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಇಡೀ ಜಾಲದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಅಪರಾಧ ವಿಭಾಗದ ಡಿಸಿಪಿ ಡಾ.ಎಸ್.ಡಿ ಶರಣಪ್ಪ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ದಂಪತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಮಂಗಳೂರಲ್ಲಿ ಸಿಸಿಬಿ ದಾಳಿ