ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಡ್ರಗ್ಸ್ ಪ್ರಕರಣವನ್ನು ಬೆನ್ನತ್ತಿ ಆರೋಪಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಸದ್ಯ ಪಶ್ಚಿಮ ವಿಭಾಗ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದು, ಕುಷ್ಠರೋಗ ಆಸ್ಪತ್ರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಷ್ಠರೋಗ ಆಸ್ಪತ್ರೆ ಬಳಿ ಗಾಂಜಾ ಮಾರಾಟ: ಆರೋಪಿ ಪೊಲೀಸ್ ಬಲೆಗೆ
ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕುಷ್ಠರೋಗ ಆಸ್ಪತ್ರೆ ಬಳಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಫ್ರೆಡ್ರಿಕ್ ಮೆಡಾಡ್ರೋ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ಬಳಿಯಿರುವ ಕುಷ್ಠರೋಗ ಆಸ್ಪತ್ರೆಯ ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬ ಮಾದಕ ವಸ್ತು ಚರಸ್ ಮಾರಾಟ ಮಾಡುತ್ತಿದ್ದಾನೆ ಎಂದು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ವೇಳೆ ದಾಳಿ ನಡೆಸಿದ ಇನ್ಸ್ಪೆಕ್ಟರ್ ಸದಾನಂದ್ ಹಾಗೂ ಅಧಿಕಾರಿಗಳು ಫ್ರೆಡ್ರಿಕ್ನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿ ಬಳಿಯಿಂದ 665 ಗ್ರಾಂ ತೂಕದ ಮಾದಕ ವಸ್ತು ಚರಸ್ ವಶಪಡಿಸಿಕೊಂಡಿದ್ದಾರೆ. ಆಸ್ಪತ್ರೆ ಬಳಿ ಗಾಂಜಾ ಮಾರಾಟ ಮಾಡಿದರೆ ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡು ತನ್ನ ಗಿರಾಕಿಗಳಿಗೆ ಗಾಂಜಾ ನೀಡುತ್ತಿದ್ದನಂತೆ. ಸದ್ಯ ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.