ಕರ್ನಾಟಕ

karnataka

ETV Bharat / state

ದೇಶದ ಭವಿಷ್ಯವನ್ನು ಡ್ರಗ್ಸ್​ ಹಾಳು ಮಾಡುತ್ತಿದೆ: ಹೈಕೋರ್ಟ್ ಕಳವಳ - Bangalore Highcourt

ಗಾಂಜಾ ಸಾಗಾಣಿಕೆಗೆ ಕುರಿತ ಪ್ರಕರಣವನ್ನು ಇಂದು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಡ್ರಗ್ಸ್ ದಂಧೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಯುವಜನತೆ ಭವಿಷ್ಯಕ್ಕೆ ಧಕ್ಕೆ ತರಲಿದೆ ಎಂದೇಳಿತು.

Highcourt
Highcourt

By

Published : Sep 24, 2020, 8:11 PM IST

ಬೆಂಗಳೂರು : ನಗರ ಪ್ರದೇಶಗಳಲ್ಲಿ ಡ್ರಗ್ ಸರಬರಾಜು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಮಾಜದ ಮೇಲೆ‌ ತೀವ್ರ ದುಷ್ಪರಿಣಾಮ ಬೀರುತ್ತಿದೆ. ದೇಶದ ಭವಿಷ್ಯವಾಗಿರುವ ಯುವ ಸಮುದಾಯದ ಬದುಕನ್ನೇ ದಿಕ್ಕು ತಪ್ಪಿಸುತ್ತಿದೆ ಎಂದು ಹೈಕೋರ್ಟ್ ಡ್ರಗ್ ಜಾಲದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ.

ಗಾಂಜಾ ಸಾಗಾಣೆಕೆ ಆರೋಪದಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಅಬ್ದುಲ್ ಅಲೀಮ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಎ. ಪಾಟೀಲ್ ಅವರಿದ್ದ ಏಕ ಸದಸ್ಯ ಪೀಠ ಈ ಕಳವಳ ವ್ಯಕ್ತಪಡಿಸಿದೆ. ಡ್ರಗ್ಸ್ ಪೂರೈಕೆ ಹಾಗೂ ಮಾರಾಟ ಜಾಲವು ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ. ಅದನ್ನು ಬೇರು ಸಹಿತ ಕಿತ್ತೊಗೆಬೇಕು. ಡ್ರಗ್ಸ್ ಪ್ರಕರಣಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಬೇಕು.‌ ಇಲ್ಲವಾದರೆ ಆರೋಪಿಗಳು ‌ಶಿಕ್ಷೆಯಿಂದ ಪಾರಾಗುತ್ತಾರೆ. ಭವಿಷ್ಯದ ಸಮಾಜವನ್ನು ದುರ್ಬಲಗೊಳಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ : ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಅಧಿಕಾರಿಗಳು 2013ರ ಆ.27ರಂದು ಅಬ್ದುಲ್ ಅಲೀಮ್ ನ ಕಾರು ತಡೆದು ಪರಿಶೀಲನೆ ನಡೆಸಿದ್ದಾಗ 15.5 ಕೆ.ಜಿ ಒಣಗಿದ ಗಾಂಜಾ ಎಲೆ ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಅಲಿಮ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಬಳಿಕ ಅಲೀಮ್, ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.

ಅರ್ಜಿದಾರನ ಪರ ವಾದಿಸಿದ್ದ ವಕೀಲರು, ಎನ್ ಡಿ‌ಪಿಎಸ್ ಕಾಯ್ದೆ ಪ್ರಕಾರ ‌ಗಾಂಜಾ ಗಿಡದ ಹೂ ಮತ್ತು ಬೀಜದಲ್ಲಿ ಮಾತ್ರ ಮಾದಕ ದ್ರವ್ಯ ಅಂಶವಿರುತ್ತದೆ. ಆದರೆ, ಅಲೀಮ್ ಕಾರಿನಿಂದ ಒಣಗಿದ ಗಾಂಜಾ ಎಲೆಗಳನ್ನಷ್ಟೇ ವಶಪಡಿಸಿಕೊಳ್ಳಲಾಗಿದೆ. ಅದನ್ನು ಪರೀಕ್ಷಿಸಿದ ಪ್ರಯೋಗಾಲಯ ವಶಪಡಿಸಿಕೊಂಡಿರುವ ಬ್ಯಾಗಿನಲ್ಲಿ ಒಣಗಿದ ಗಾಂಜಾ ಗಿಡದ ಎಲೆ, ಹೂ, ಹಣ್ಣು ಮತ್ತು ಬೀಜ ಇದ್ದವು ಎಂದು ವರದಿ ಸಲ್ಲಿಸಿದೆ.

ಆದರೆ ಅವುಗಳಲ್ಲಿ ಮಾದಕ ದ್ರವ್ಯದ ಪ್ರಮಾಣ ಎಷ್ಟಿತ್ತು ಎಂದು ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ವಶಪಡಿಸಿಕೊಂಡ ವಸ್ತುಗಳಲ್ಲಿ ಮಾದಕ ದ್ರವ್ಯ ಎಷ್ಟು ಪ್ರಮಾಣದಲ್ಲಿ ಇತ್ತು ಎಂಬುದನ್ನು ನಿಖರವಾಗಿ ಹೇಳಬೇಕಿತ್ತು. ಹೀಗಾಗಿ, ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು. ವಾದ ಪುರಸ್ಕರಿಸಿದ ಪೀಠ ಪ್ರಕರಣ ರದ್ದುಪಡಿಸಿದೆ.
ಆದರೆ, ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠ, ಪ್ರಕರಣದಲ್ಲಿ ಕಾನೂನಾತ್ಮಕ ಅಂಶಗಳ ಕೊರತೆಯಿಂದಾಗಿ ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸುವುದು ಬಿಟ್ಟು ಬೇರೆ ದಾರಿ ಇಲ್ಲದಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.

ABOUT THE AUTHOR

...view details